
ಬೆಂಗಳೂರು, 26 ಮೇ (ಹಿ.ಸ.) :
ಆ್ಯಂಕರ್ : ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್ನಲ್ಲಿ ಮತ್ತೆ ನಿರಾಸೆಯಾಗಿದೆ. ತಮಗೆ ವಿಧಿಸಿರುವ ಜೀವಾವಧಿ ಶಿಕ್ಷೆಗೆ ತಡೆ ನೀಡಿ ಜಾಮೀನು ಮಂಜೂರು ಮಾಡುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜೂನ್ 1ಕ್ಕೆ ಮುಂದೂಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡುವಂತೆ ವಿನಯ್ ಕುಲಕರ್ಣಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಸಹ ಅವರು ಕೋರಿದರು. ಶಿಕ್ಷೆ ಪ್ರಕಟವಾದ ಹಿನ್ನೆಲೆ ಅವರು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದು, ಖಾಲಿ ಸ್ಥಾನಕ್ಕೆ ಶೀಘ್ರದಲ್ಲೇ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸುವ ಸಾಧ್ಯತೆ ಇರುವುದರಿಂದ ತುರ್ತು ವಿಚಾರಣೆ ಅಗತ್ಯ ಎಂದು ವಾದ ಮಂಡಿಸಲಾಯಿತು.
ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ಸಿಬಿಐ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಜೂನ್ 1ಕ್ಕೆ ನಿಗದಿಪಡಿಸಿದೆ. ಇದರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ವಿನಯ್ ಕುಲಕರ್ಣಿಗೆ ಮತ್ತೊಮ್ಮೆ ನಿರಾಸೆಯಾಗಿದೆ.
ಈ ನಡುವೆ ಜೀವಾವಧಿ ಶಿಕ್ಷೆ ಹಿನ್ನೆಲೆ ವಿನಯ್ ಕುಲಕರ್ಣಿಯ ಶಾಸಕ ಸ್ಥಾನವನ್ನು ಅನರ್ಹಗೊಳಿಸಿರುವುದಾಗಿ ರಾಜ್ಯ ವಿಧಾನಸಭೆ ಕಾರ್ಯದರ್ಶಿಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ಏಪ್ರಿಲ್ 13ರಂದು ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಯನ್ನು ನ್ಯಾಯಾಲಯ ದೋಷಿಗಳೆಂದು ಘೋಷಿಸಿತ್ತು. ಬಳಿಕ ಏಪ್ರಿಲ್ 15ರಂದು ಅವರ ವಿಧಾನಸಭಾ ಸದಸ್ಯತ್ವ ರದ್ದುಗೊಂಡಿರುವುದಾಗಿ ಪ್ರಕಟಣೆ ಹೊರಬಿದ್ದಿತ್ತು.
2016ರ ಜೂನ್ನಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆಯಾಗಿದ್ದರು. ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 21 ಮಂದಿಯ ವಿರುದ್ಧ ಆರೋಪ ಕೇಳಿಬಂದಿತ್ತು. ಬಳಿಕ ಪ್ರಕರಣವನ್ನು ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿತ್ತು. ತನಿಖೆ ನಡೆಸಿದ ಸಿಬಿಐ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh.M.B.