ಇಂದು ಪ್ರಧಾನಿ ಮೋದಿ ಕುರಿತ ‘ಅಪನಾಪನ್’ ಪುಸ್ತಕ ಬಿಡುಗಡೆ
ಪೂಸಾದಲ್ಲಿ ನಡೆಯುವ ಸಮಾರಂಭಕ್ಕೆ ದೇವೇಗೌಡ, ವೆಂಕಯ್ಯ ನಾಯ್ಡು ಸೇರಿದಂತೆ ಗಣ್ಯರ ಉಪಸ್ಥಿತಿ
Book


ನವದೆಹಲಿ, 26 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಕಾರ್ಯಶೈಲಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ರಚಿಸಿರುವ ‘ಅಪನಾಪನ್’ ಪುಸ್ತಕದ ಬಿಡುಗಡೆ ಸಮಾರಂಭ ಇಂದು ನವದೆಹಲಿಯ ಪೂಸಾದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಭಾರತರತ್ನ ಸಿ. ಸುಬ್ರಮಣಿಯಂ ಸಭಾಂಗಣದಲ್ಲಿ ನಡೆಯಲಿದೆ.

ಈ ಕುರಿತು ಅಧಿಕೃತ ಪ್ರಕಟಣೆ ತಿಳಿಸಿದ್ದು, ಪೂಸಾದ ರಾಷ್ಟ್ರೀಯ ಕೃಷಿ ವಿಜ್ಞಾನ ಸಂಕೀರ್ಣದಲ್ಲಿರುವ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಮಾಜಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಲವು ಕೇಂದ್ರ ಸಚಿವರು, ರಾಜ್ಯಪಾಲರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಮಾಜಸೇವಕರು, ಲೇಖಕರು ಹಾಗೂ ಪತ್ರಕರ್ತರೂ ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ.

‘ಅಪನಾಪನ್’ ಕೃತಿಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನಿ ಮೋದಿ ಅವರೊಂದಿಗೆ ವಿವಿಧ ಹಂತಗಳಲ್ಲಿ ಹೊಂದಿದ ಅನುಭವಗಳನ್ನು ಆತ್ಮೀಯವಾಗಿ ದಾಖಲಿಸಿದ್ದಾರೆ. ಇದು ಕೇವಲ ಘಟನೆಗಳ ಸಂಗ್ರಹವಲ್ಲ, ಒಂದು ವಿಚಾರಯಾತ್ರೆಯಾಗಿದೆ ಎಂದು ಚೌಹಾಣ್ ಅಭಿಪ್ರಾಯಪಟ್ಟಿದ್ದಾರೆ. ಸಂಘಟನೆ, ಸಮರ್ಪಣೆ ಮತ್ತು ರಾಷ್ಟ್ರ ನಿರ್ಮಾಣದ ಸಂದೇಶಗಳನ್ನು ಈ ಪುಸ್ತಕದಲ್ಲಿ ಜೀವಂತವಾಗಿ ಚಿತ್ರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ಇದೇ ದಿನ 2014ರಲ್ಲಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಹಿನ್ನೆಲೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂತಸ ವ್ಯಕ್ತಪಡಿಸಿರುವ ಶಿವರಾಜ್ ಸಿಂಗ್ ಚೌಹಾಣ್, ಮೋದಿ ಸರ್ಕಾರದ 12 ವರ್ಷದ ಆಡಳಿತವನ್ನು “ಭಾರತದ ನವ ನಿರ್ಮಾಣದ ಸುವರ್ಣಯುಗ” ಎಂದು ಬಣ್ಣಿಸಿದ್ದಾರೆ.

“ಸಬ್ಕಾ ಸಾಥ್, ಸಬ್ಕಾ ವಿಕಾಸ್” ಮಂತ್ರದಡಿ ಗ್ರಾಮೀಣರು, ಬಡವರು, ರೈತರು, ಮಹಿಳೆಯರು ಮತ್ತು ಯುವಕರ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದಿದೆ. ಅಂತ್ಯೋದಯದ ಸಂಕಲ್ಪ ಸಾಕಾರಗೊಂಡಿದೆ ಎಂದು ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ದೇಶವನ್ನು ಮತ್ತಷ್ಟು ಶಕ್ತಿಶಾಲಿ, ಸಮೃದ್ಧ ಹಾಗೂ ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ರೂಪಿಸುವ ಈ ಪಯಣದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಶಿವರಾಜ್ ಸಿಂಗ್ ಚೌಹಾಣ್ ಕರೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande