
ಕೊಪ್ಪಳ, 26 ಮೇ (ಹಿ.ಸ.) :
ಆ್ಯಂಕರ್ : ನಾವೆಲ್ಲರೂ ಸೇರಿ ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಬಕ್ರಿದ್ ಹಬ್ಬ ಆಚರಿಸೋಣ ಎಂದು ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ ಇಟ್ನಾಳ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾಡಳಿತದ ಭವನದಲ್ಲಿನ ಡಾ.ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಬಕ್ರಿದ್ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇವರ ಉಪಾಸನಾ ಸ್ವಾತಂತ್ರ್ಯವೂ ಪ್ರತಿಯೊಬ್ಬರಿಗೂ ಸಂವಿಧಾನಬದ್ಧವಾಗಿ ಲಭಿಸಿದೆ. ಆದ್ದರಿಂದ ಸಾರ್ವಜನಿಕರ ಹಿತಾಸಕ್ತಿಗೆ ದಕ್ಕೆ ಬಾರದಂತೆ ನಾವೆಲ್ಲರೂ ಶಾಂತಿ ಪ್ರೀತಿಯಿಂದ ಹಬ್ಬ ಆಚರಣೆ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿನ ಕೆಲವು ವದಂತಿಗಳಿಗೆ ಯಾರು ಸಹ ಕಿಡಿಗೊಡಬಾರದು. ಏನೇ ಸಮಸ್ಯೆ ಇದ್ದರು ಅದನ್ನು ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಜಾನುವಾರು ಸಾಗಣೆಯಂತಹ ಪ್ರಕರಣಗಳು ಕಂಡು ಬಂದಾಗ ಆ ಬಗ್ಗೆ ತಪ್ಪು ಕಲ್ಪನೆ ಹೊಂದಿ ಕಾನೂನು ಉಲ್ಲಂಘಿಸುವಂತಹ ಕೃತ್ಯಗಳಲ್ಲಿ ತೊಡಗಬಾರದು. ಪೊಲೀಸ್ ಇಲಾಖೆಯ ಗಮನಕ್ಕೆ ತಂದಲ್ಲಿ ಪೊಲೀಸ್ ಅಧಿಕಾರಿಗಳೇ ಅದನ್ನು ಪರಿಶೀಲಿಸಿ ಕ್ರಮ ಜರುಗಿಸುತ್ತಾರೆ ಎಂದರು. ಹಬ್ಬದ ಸಂದರ್ಭದಲ್ಲಿ ಯಾರಿಗೂ ಸಹ ಕಿರಿಕಿರಿಯಾಗದಂತೆ, ಉಪದ್ರವಕ್ಕೆ ಅವಕಾಶಕೊಡದ ಹಾಗೆ ಶುಚಿತ್ವ ಕಾಯ್ದುಕೊಂಡು ಹೋಗಲು ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ ಅವರು ಮಾತನಾಡಿ, ಕಳೆದ ಹತ್ತಾರು ವರ್ಷಗಳಿಂದ ಬಕ್ರಿದ್ ಹಬ್ಬವು ಕೊಪ್ಪಳ ಜಿಲ್ಲೆಯಲ್ಲಿ ಸೌಹಾರ್ದಯುತವಾಗಿ ನಡೆದುಕೊಂಡು ಬಂದ ಸಂಪ್ರದಾಯ ಮುಂದುವರೆಯಬೇಕು. ಇದಕ್ಕೆ ಎಲ್ಲ ಧರ್ಮಗಳ ಬಂಧುಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಯಾವುದೇ ಕಡೆಗಳಲ್ಲಿ ಯಾರಾದರು ಗೋವುಗಳನ್ನು ಸಾಗಿಸುವುದು ಕಂಡು ಬಂದಲ್ಲಿ ಆ ಬಗ್ಗೆ ಕೂಡಲೇ 112 ಸಹಾಯವಾಣಿ ಸಂಖ್ಯೆ ಅಥವಾ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದಲ್ಲಿ ನಾವೇ ಘಟನೆಯ ಬಗ್ಗೆ ಸಮಗ್ರ ಪರಿಶೀಲಿಸಿ, ತಪ್ಪು ಎಂಬುದು ಸಾಬೀತಾದಲ್ಲಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳುತ್ತೇವೆ. ಆದ್ದರಿಂದ ಯಾವುದೇ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜನತೆಗೆ ತಪ್ಪು ಸಂದೇಶ ರವಾನೆ ಮಾಡಬಾರದು. ಸಾಮಾಜಿಕ ಜಾಲತಾಣಗಳಲ್ಲಿನ ಉಹಾಪೋಹಗಳಿಗೆ ಯಾರು ಸಹ ಕಿವಿಗೊಡಬಾರದು. ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಅಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನದ ಸೌಕರ್ಯ ಇರುತ್ತದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಹಲವಾರು ದಶಕಗಳಿಂದಲೂ ಹಿಂದು-ಮುಸ್ಲಿಂ ಬಾಂಧವರು ಎಲ್ಲ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಈಗಲೂ, ಇನ್ಮುಂದೆಯೂ ಅದೇ ರೀತಿ ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಇರುತ್ತೇವೆ. ಹಬ್ಬದ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ಶಾಂತಿಪಾಲನೆಗೆ ಅವಕಾಶ ಕಲ್ಪಿಸಬೇಕು. ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಮುಖಂಡರಾದ ಯಮನೂರಪ್ಪ ನಾಯಕ, ಎಸ್.ಬಿ.ಖಾದ್ರಿ ಸೇರಿದಂತೆ ಇನ್ನೀತರರು ಸಭೆಗೆ ಸಲಹೆ ಮಾಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೇಮಂತಕುಮಾರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ಪೊಲೀಸ್ ಉಪಾಧೀಕ್ಷಕರು, ಇನ್ನೀತರ ಪೊಲೀಸ್ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್