


ಬಳ್ಳಾರಿ, 26 ಮೇ (ಹಿ.ಸ.) :
ಆ್ಯಂಕರ್ : ನೆಲ, ಜಲ, ಪರಿಸರ ಒಂದಕ್ಕೊಂದು ಅನ್ಯೋನ್ಯವಾಗಿ ಸಹಬಾಳ್ವೆಯಿಂದ ಬದುಕು ನಡೆಸುತ್ತಿದ್ದು ಮನುಷ್ಯ ಮಾತ್ರ ಪರಿಸರದ ವಿರುದ್ಧ ಜೀವನ ನಡೆಸುತ್ತಿದ್ದಾನೆ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕಾನೂನು ಸೇವೆಗಳ ಪ್ರಾಧೀಕಾರದ ಸದಸ್ಯ ಕಾರ್ಯದರ್ಶಿ ರಾಜೇಶ ಹೊಸಮನಿ ಅವರು ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಛೇರಿ ಹಾಗೂ ವಿಶ್ರೀಕೃವಿವಿ ಸಹಭಾಗಿತ್ವದಲ್ಲಿ ವಿವಿಯ ಆವರಣದಲ್ಲಿ ನಡೆದ `ಪರಿಸರ ಜಾಗೃತಿ ಹಾಗೂ ವಿಶ್ವ ಭೂ ಮತ್ತು ಜಲ ದಿನಾಚರಣೆ-2026’ಯ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸದ್ಯದ ಪರಿಸ್ಥಿತಿಯಲ್ಲಿ ಜೀವಜಲವನ್ನು ಖರೀದಿಸಿ ಕುಡಿಯುವ ಆಪತ್ತು ಎದುರಾಗಿದೆ ಮುಂದೊಂದು ದಿನ ಉಸಿರಾಡುವ ಗಾಳಿಯನ್ನು ಖರೀದಿಸುವ ಕಾಲ ಎದುರಾದರೂ ಆಶ್ಚರ್ಯ ಪಡಬೇಕಿಲ್ಲ. ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವ ಅಭಿಯಾನ ಬಿಟ್ಟು ಪರಿಸರ ಸುಧಾರಿಸುವ ಕ್ರಮಗಳನ್ನು ಈಗಲೇ ಅಳವಡಿಸಿಕೊಳ್ಳುವುದು ಸೂಕ್ತ ಎಂದರು.
ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಭಾಗೀಯ ಕಛೇರಿಯ ಹಿರಿಯ ಪರಿಸರ ಅಧಿಕಾರಿಗಳಾದ ಬಿ.ಎಸ್. ಮುರಳೀಧರ್ ಅವರು, ಮಾನವನ ಸರಳ ಜೀವನವೇ ಪರಿಸರದ ಸುಸ್ಥಿರ ಅಭಿವೃದ್ಧಿಗೆ ಪೂರಕ. ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಸದಿಂದ ರಸ ಉತ್ಪಾದಿಸುವ ಕಲೆ ನಾವೆಲ್ಲ ಕಲಿಯಬೇಕು. ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ತಗ್ಗಿಸಬೇಕು. ನೀರನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರವೇ ಬಳಸಬೇಕು. ಪಂಚಭೂತಗಳ ರಕ್ಷಣೆ ಮನುಕುಲದ ಮುಂದಿನ ಪೀಳಿಗೆಗೆ ನಾವು ನೀಡುವ ಕೊಡುಗೆ. ಪ್ರತಿ ಮನುಷ್ಯನು ಪರಿಸರ ಯೋಧರಾಗಿ ಕೆಲಸ ಮಾಡುವ ಅನಿವಾರ್ಯತೆ ಇಂದು ಎದುರಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಭಾಗೀಯ ಕಛೇರಿಯ ಪರಿಸರ ಅಧಿಕಾರಿಗಳಾದ ಸಿದ್ದೇಶ್ವರ ಬಾಬು ಅವರು, ಉತ್ತಮ ಆರೋಗ್ಯಕ್ಕೆ ಉತ್ತಮ ಪರಿಸರ ಅಗತ್ಯವಿದೆ. ಮಾನವನ ಆಧುನಿಕ ಜೀವನಶೈಲಿಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಎಲ್ಲರೂ ‘ರೆಡ್ಯೂಸ್, ರಿಯೂಸ್, ರಿಸೈಕಲ್’ ಎಂಬ ಸಿದ್ದಾಂತ ಪಾಲಿಸಬೇಕು ಎಂದು ಕರೆ ನೀಡಿದರು.
ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ಎಂ ಮುನಿರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಹಸಿ ಕಸ ಮತ್ತು ಒಣ ಕಸಗಳ ಸಮರ್ಪಕ ವಿಂಗಡನೆಯಿಂದ ಶೇಕಡಾ 50ರಷ್ಟು ಪರಿಸರ ಹಾನಿಯನ್ನು ತಡೆಯಬಹುದು. ಸಾವಯವ ಗೊಬ್ಬರ ನಿರ್ಮಾಣ, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ನಮ್ಮೆಲ್ಲರ ಆದ್ಯತೆಯಾಗಬೇಕು. ನೀರಿನ ಸಂರಕ್ಷಣೆಗೆ ಸುಮಾರು 60ಲಕ್ಷ ವೆಚ್ಚದಲ್ಲಿ ವಿವಿ ಆವರಣದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮತ್ತು ವಿವಿಧ ಹಣ್ಣು, ಹೂವುಗಳ ಸಸಿಗಳನ್ನು ನೆಟ್ಟು ಪೋಷಿಸುವ ಯೋಜನೆಗೆ ಚಾಲನೆ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮ ಆರಂಭಕ್ಕೂ ಮೊದಲು ದಿನಾಚರಣೆಯದ ಸ್ಮರಣಾರ್ಥ ವಿವಿಯ ಆವರಣದಲ್ಲಿ ಗಣ್ಯರು ಸಸಿಗಳನ್ನು ನೆಟ್ಟರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ ವಿ. ಲೋಕೇಶ್, ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ ಎನ್.ಎಂ. ಸಾಲಿ, ವಿತ್ತಾಧಿಕಾರಿಗಳಾದ ಸ್ಫೂರ್ತಿ ,ಕೆ.ಜಿ, ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ಸಂಯೋಜಕರಾದ ಪ್ರಾಣಿಶಾಸ್ತ್ರ ವಿಭಾಗದ ಡಾ ನಾಗಭೂಷಣ್ ಚರಂತಿಮಠ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಚನ್ನಬಸವ ಹಾಗೂ ಶಾರದಾ ನಿರೂಪಿಸಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸೋಮಶೇಖರ ವಂದಿಸಿದರು.
ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್