
ನವದೆಹಲಿ, 26 ಮೇ (ಹಿ.ಸ.) :
ಆ್ಯಂಕರ್ : ಕರ್ನಾಟಕ ಕಾಂಗ್ರೆಸ್ ನಾಯಕರ ದೆಹಲಿ ಭೇಟಿಯ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಕೇಳಿಬರುತ್ತಿದ್ದ ನಾಯಕತ್ವ ಬದಲಾವಣೆ, ಅಧಿಕಾರ ಹಂಚಿಕೆ ಹಾಗೂ ಒಳಜಗಳ ಕುರಿತ ಊಹಾಪೋಹಗಳಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸ್ಪಷ್ಟನೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಕೇವಲ ಮುಂಬರುವ ಚುನಾವಣೆಗಳ ಕುರಿತ ವಿಚಾರಗಳನ್ನೇ ಚರ್ಚಿಸಲಾಗಿದೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕ ಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್ ಭಾಗವಹಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇಣುಗೋಪಾಲ್, “ಸಭೆಯಲ್ಲಿ ಮುಖ್ಯವಾಗಿ ಮುಂಬರುವ ವಿಧಾನ ಪರಿಷತ್ ಚುನಾವಣೆ ಹಾಗೂ ರಾಜ್ಯ ಸಭಾ ಚುನಾವಣೆಯ ಸಿದ್ಧತೆ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ. ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಕಾರ್ಯತಂತ್ರ ಹಾಗೂ ಸಂಘಟನಾ ಸಿದ್ಧತೆಗಳ ಬಗ್ಗೆ ಮಾತ್ರ ಮಾತುಕತೆ ನಡೆದಿದೆ,” ಎಂದು ತಿಳಿಸಿದರು.
“ಚುನಾವಣೆ ವಿಚಾರಗಳನ್ನು ಹೊರತುಪಡಿಸಿ ಬೇರೆ ಯಾವುದೇ ರಾಜಕೀಯ ಬೆಳವಣಿಗೆ, ನಾಯಕತ್ವ ಬದಲಾವಣೆ ಅಥವಾ ಆಡಳಿತ ಸಂಬಂಧಿತ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಇತರೆ ಎಲ್ಲಾ ಸುದ್ದಿಗಳು ಕೇವಲ ಊಹಾಪೋಹ ಮತ್ತು ವದಂತಿಗಳಷ್ಟೇ,” ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ, ಡಿಸಿಎಂ ಅಧಿಕಾರ ವಿಸ್ತರಣೆ ಹಾಗೂ ಸಂಘಟನಾ ಪುನರ್ರಚನೆ ಕುರಿತಂತೆ ಇತ್ತೀಚೆಗೆ ಹಲವು ರಾಜಕೀಯ ಚರ್ಚೆಗಳು ಜೋರಾಗಿದ್ದವು. ದೆಹಲಿಯಲ್ಲಿ ನಡೆದ ಈ ಸಭೆಗೆ ಆ ಚರ್ಚೆಗಳೇ ಕಾರಣ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆದರೆ ವೇಣುಗೋಪಾಲ್ ನೀಡಿದ ಸ್ಪಷ್ಟನೆ ನಂತರ ಕಾಂಗ್ರೆಸ್ ನಾಯಕತ್ವ ಚುನಾವಣಾ ಸಿದ್ಧತೆಗಳತ್ತ ಮಾತ್ರ ಗಮನಹರಿಸಿದೆ ಎಂಬ ಸಂದೇಶ ಹೊರಬಿದ್ದಿದೆ.
ಜಂಟಿ ಸುದ್ದಿಗೋಷ್ಟಿ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.