
ಕೋಲಾರ, ಮೇ ೨೬(ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ಕನ್ನಡ ಭಾಷೆಯ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವ ವಾಣಿಜ್ಯ ಮಳಿಗೆಗಳು, ಬ್ಯಾಂಕ್ಗಳು ಹಾಗೂ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಕಳೆದ ಸಭೆಗಳಲ್ಲಿ ನೀಡಿದ ಸೂಚನೆಗಳ ಹೊರತಾಗಿಯೂ ಕನ್ನಡ ಅನುಷ್ಠಾನ ನೂರಕ್ಕೆ ನೂರರಷ್ಟು ಆಗುತ್ತಿಲ್ಲ ಎಂದು ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದರು.
ಎಲ್ಲಾ ಅಂಗಡಿ ಮುಂಗಟ್ಟುಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ನಾಮಫಲಕಗಳಲ್ಲಿ ಶೇಕಡಾ ೬೦ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಇರಬೇಕು. ನಿಯಮ ಉಲ್ಲಂಘಿಸುವ ಉದ್ದಿಮೆಗಳಿಗೆ ಮೊದಲು ಎಚ್ಚರಿಕೆ ನೋಟಿಸ್ ನೀಡಬೇಕು. ನೋಟಿಸ್ ನೀಡಿದ ಮೇಲೂ ನಾಮಫಲಕ ಬದಲಿಸದಿದ್ದರೆ ಅಂತಹ ಉದ್ದಿಮೆಗಳ ವಾಣಿಜ್ಯ ಪರವಾನಗಿಯನ್ನು ರದ್ದುಪಡಿಸುವಂತೆ ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಹೆದ್ದಾರಿ ಬದಿಯ ಜಾಹೀರಾತು ಫಲಕಗಳು ಮತ್ತು ಜೈನ್ ಕಾಲೇಜು ಸೇರಿದಂತೆ ವಿವಿಧೆಡೆ ಕೇವಲ ಇಂಗ್ಲಿಷ್ ನಾಮಫಲಕಗಳಿರುವುದನ್ನು ಗಮನಿಸಿದ್ದು, ತಕ್ಷಣ ಅವುಗಳನ್ನು ತೆರವುಗೊಳಿಸಿ ಕನ್ನಡ ಅಳವಡಿಸಲು ಕ್ರಮವಹಿಸುವಂತೆ ಸೂಚಿಸಿದರು.
ಬ್ಯಾಂಕಿAಗ್ ವಲಯದಲ್ಲಿ ಕನ್ನಡ ಬಳಕೆಯಾಗುತ್ತಿಲ್ಲ ಎಂಬ ದೂರುಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಬ್ಯಾಂಕ್ ಚಲನ್ಗಳು ಹಾಗೂ ಅರ್ಜಿಗಳು ಕೇವಲ ಹಿಂದಿ ಮತ್ತು ಇಂಗ್ಲಿಷ್ನಲ್ಲಿರುವುದನ್ನು ಆಕ್ಷೇಪಿಸಿದರು. ಎಲ್ಲಾ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ಗಳಲ್ಲಿ ಕಡ್ಡಾಯವಾಗಿ ಕನ್ನಡದ ಅರ್ಜಿಗಳು ದೊರೆಯುವಂತೆ ಮಾಡಬೇಕು. ಹೊರ ರಾಜ್ಯಗಳಿಂದ ಬಂದಿರುವ ಬ್ಯಾಂಕ್ ಸಿಬ್ಬಂದಿಗೆ, ಗ್ರಾಹಕರೊಂದಿಗೆ ವ್ಯವಹರಿಸಲು ಅನುಕೂಲವಾಗುವಂತೆ ಕನ್ನಡ ಕಲಿಯಲು ತರಬೇತಿ ಶಿಬಿರಗಳನ್ನು ಆಯೋಜಿಸುವಂತೆ ಲೀಡ್ ಬ್ಯಾಂಕ್ ಮ್ಯಾನೇಜರ್ಗೆ ಸೂಚನೆ ನೀಡಿದರು.
ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ 'ಸರೋಜಿನಿ ಮಹಿಷಿ ವರದಿ'ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಸಿ ಮತ್ತು ಡಿ ವೃಂದದ ಹುದ್ದೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತಿದೆಯೇ ಎಂಬುದರ ಬಗ್ಗೆ ತ್ರೈಮಾಸಿಕ ವರದಿ ಪಡೆಯುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಖಾನೆಗಳ ಆವರಣದಲ್ಲಿ ಮತ್ತು ಕಾರ್ಮಿಕರ ಸಂಪರ್ಕದ ಸೂಚನಾ ಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು ಎಂದು ತಾಕೀತು ಮಾಡಿದರು. ಸಿಬಿಎಸ್ಇ ಮತ್ತು ಐಸಿಎಸ್ಇ ಸೇರಿದಂತೆ ಎಲ್ಲಾ ಖಾಸಗಿ ಹಾಗೂ ಕೇಂದ್ರೀಯ ವಿದ್ಯಾಲಯಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯವಾಗಿ ಬೋಧಿಸಲೇಬೇಕು. ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು. ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ನಡೆಯುವ ಪೂಜಾ ವಿಧಿವಿಧಾನಗಳು ಹಾಗೂ ಮಂತ್ರೋಚ್ಚಾರಣೆಗಳು ಭಕ್ತರಿಗೆ ಅರ್ಥವಾಗುವಂತೆ ಕನ್ನಡದಲ್ಲಿಯೇ ಇರಬೇಕು.
ಅರ್ಚಕರು ಪೂಜೆ ಮಾಡುವಾಗ ಕನ್ನಡ ಭಾಷೆಯನ್ನೇ ಬಳಸುವ ಬಗ್ಗೆ ಮುಜರಾಯಿ ಇಲಾಖೆಯ ಅಧಿಕಾರಿಗಳು ಸುತ್ತೋಲೆ ಹೊರಡಿಸಿ, ತರಬೇತಿ ನೀಡಬೇಕು ಎಂದು ತಿಳಿಸಿದರು. ಭಾಷೆಯ ವಿಚಾರದಲ್ಲಿ ಯಾರಿಗೂ ದ್ವೇಷ ಬೇಡ, ಆದರೆ ಆಡಳಿತಾತ್ಮಕವಾಗಿ ಕನ್ನಡದ ಜಾರಿ ನಮ್ಮ ಹಕ್ಕು ಮತ್ತು ಕರ್ತವ್ಯವಾಗಿದೆ. ಕನ್ನಡವನ್ನು ಕೀಳರಿಮೆಯಿಂದ ನೋಡುವ ಪ್ರವೃತ್ತಿ ಬಿಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಉರ್ದು ಶಾಲೆಗಳ ಮಕ್ಕಳಿಗೆ ಕನ್ನಡ ಶಿಕ್ಷಕರನ್ನು ನೇಮಿಸಿದ್ದು, ಅವರಿಗೆ ಕಡ್ಡಾಯವಾಗಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದು ಅವಶ್ಯವಾಗಿದೆ. ಈ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸರ್ವರೂ ಕನ್ನಡವನ್ನು ತಮ್ಮ ಮನದಾಳದಿಂದ ಪ್ರೀತಿಸಿ ಗೌರವಿಸಬೇಕು. ಕನ್ನಡವನ್ನೇ ಮಾತನಾಡಬೇಕು. ಇದರಿಂದ ಕನ್ನಡವನ್ನು ಉಳಿಸಿ ಬೆಳಸಬಹುದಾಗಿದೆ ಜೊತೆಗೆ ಕನ್ನಡ ಪ್ರೇಮವೂ ಹೆಚ್ಚುತ್ತದೆ ಎಂದು ಸಮಿತಿಯ ಸದಸ್ಯರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ ಬಾಗೇವಾಡಿ, ಅಪರ ಪೊಲೀಸ್ ವರಿಷ್ಟಾಧಿಕಾರಿ ಜಗದೀಶ್, ಕೈಗಾರಿಕೆಗಳ ಇಲಾಖೆ ಉಪನಿರ್ದೇಶಕ ರಫೀಕ್, ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕಿ ಅಂಬಿಕಾ, ಸಮಿತಿಯ ಸದಸ್ಯರಾದ ಬಾಹ ಶೇಖರಪ್ಪ, ಮಂಜುನಾಥ್, ನೇತ್ರಾವತಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್