ಗ್ಯಾರೆಂಟಿ ಯೋಜನೆಗಳ ಮರುಪರಿಶೀಲನೆಗೆ ಅಶೋಕ್ ಆಕ್ರೋಶ
ಬಡವರ ಬದುಕಿನೊಂದಿಗೆ ರಾಜಕೀಯ ಆಟ ಬೇಡ” ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ
ಅಶೋಕ


ಬೆಂಗಳೂರು, 26 ಮೇ (ಹಿ.ಸ.) :

ಆ್ಯಂಕರ್ : ಗ್ಯಾರೆಂಟಿ ಯೋಜನೆಗಳ ಮರುಪರಿಶೀಲನೆ ಮತ್ತು ಮರು ನೋಂದಣಿ ಪ್ರಕ್ರಿಯೆ ಕುರಿತು ಪ್ರತಿ ಪಕ್ಷದ ನಾಯಕ ಆರ್.ಅಶೋಕ, ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಗ್ಯಾರೆಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ರಾಜಕೀಯ ಗಿಮಿಕ್ ಮಾತ್ರವೇ ಹೊರತು, ಬಡವರ ಬದುಕಿನ ಬಗ್ಗೆ ಇರುವ ನಿಜವಾದ ಕಾಳಜಿ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಇದುವರೆಗೆ “ಗ್ಯಾರೆಂಟಿ” ಎಂದು ಪ್ರಚಾರ ಮಾಡುತ್ತಿದ್ದ ಸರ್ಕಾರ ಈಗ ಏಕಾಏಕಿ “ಫಲಾನುಭವಿಗಳ ಮರುಪರಿಶೀಲನೆ”, “ಮರು ನೋಂದಣಿ” ಹಾಗೂ “ವಿಶೇಷ ಅಭಿಯಾನ” ಎಂಬ ಹೆಸರಿನಲ್ಲಿ ಹೊಸ ನಾಟಕ ಆರಂಭಿಸಿದೆ ಎಂದು ಟೀಕಿಸಿದ್ದಾರೆ.

ಸತ್ತವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವುದು ಸರ್ಕಾರದ ದೈನಂದಿನ ಆಡಳಿತಾತ್ಮಕ ಪ್ರಕ್ರಿಯೆಯಾಗಿದ್ದು, ಅದಕ್ಕಾಗಿ ವಿಶೇಷ ಅಭಿಯಾನ ನಡೆಸುವ ಅಗತ್ಯವೇನು ಎಂದು ಪ್ರಶ್ನಿಸಿದ ಅಶೋಕ್, ಬಡವರನ್ನು ಮತ್ತೆ ಅರ್ಜಿ ಹಿಡಿದು ಸರತಿ ಸಾಲಿನಲ್ಲಿ ನಿಲ್ಲಿಸುವ ಮೂಲಕ ಸರ್ಕಾರದ ನಿಜವಾದ ಉದ್ದೇಶ ಏನು ಎಂಬ ಅನುಮಾನ ಜನರಲ್ಲಿ ಮೂಡಿದೆ ಎಂದು ಹೇಳಿದ್ದಾರೆ.

ಗ್ಯಾರೆಂಟಿ ಯೋಜನೆಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲು ಸರ್ಕಾರ ಪೀಠಿಕೆ ಸಿದ್ಧಪಡಿಸುತ್ತಿದೆಯೇ ಅಥವಾ ಸ್ಥಳೀಯ ಸಂಸ್ಥೆ ಹಾಗೂ ಜಿಬಿಎ ಚುನಾವಣೆಯವರೆಗೆ ಮಾತ್ರ ಹಣ ನೀಡಿ ಬಳಿಕ ಫಲಾನುಭವಿಗಳ ಹೆಸರಿಲ್ಲ ಎಂಬ ನೆಪ ಹೇಳಲು ಸಿದ್ಧತೆ ನಡೆಸುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದ ಸಾಲ ಈಗಾಗಲೇ 7 ಲಕ್ಷ ಕೋಟಿ ರೂಪಾಯಿ ಗಡಿ ದಾಟಿದೆ. ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಗುತ್ತಿಗೆದಾರರಿಗೆ ಹಣವಿಲ್ಲ, ರೈತರಿಗೆ ಬೆಂಬಲವಿಲ್ಲ ಹಾಗೂ ಸರ್ಕಾರಿ ನೌಕರರ ಬೇಡಿಕೆಗಳಿಗೆ ಸ್ಪಂದನೆ ಇಲ್ಲ ಎಂದು ಆರೋಪಿಸಿದ ಅಶೋಕ್, ಸರ್ಕಾರದ ಸಂಪೂರ್ಣ ಗಮನ “ಗ್ಯಾರೆಂಟಿ” ಎಂಬ ರಾಜಕೀಯ ಪ್ರಚಾರದ ಮೇಲಷ್ಟೇ ಇದೆ ಎಂದು ಟೀಕಿಸಿದರು.

ಇದೇ ವೇಳೆ ಜನರಲ್ಲಿ ಮೂಡಿರುವ ಅನುಮಾನಗಳನ್ನು ಉಲ್ಲೇಖಿಸಿದ ಅವರು, ಮರುಪರಿಶೀಲನೆ ಪ್ರಕ್ರಿಯೆ ಮುಗಿಯುವವರೆಗೆ ಯೋಜನೆಗಳ ಹಣ ತಡೆಹಿಡಿಯಲಾಗುತ್ತದೆಯೇ, ಗೃಹಲಕ್ಷ್ಮೀ ಹಣ ನಿಲ್ಲುತ್ತದೆಯೇ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳ ಫಲಾನುಭವಿಗಳನ್ನು ಕಡಿತಗೊಳಿಸುವ ಗುಪ್ತ ಕಾರ್ಯಾಚರಣೆ ನಡೆಯುತ್ತಿದೆಯೇ ಎಂಬ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಗ್ಯಾರೆಂಟಿ ಯೋಜನೆಗಳು ಮುಂದುವರಿಯುತ್ತವೆಯೇ ಇಲ್ಲವೇ, ಮರು ನೋಂದಣಿ ಅವಧಿಯಲ್ಲೂ ಹಣ ಬಿಡುಗಡೆ ಆಗುತ್ತದೆಯೇ, ಎಷ್ಟು ಲಕ್ಷ ಜನರನ್ನು ಪಟ್ಟಿಯಿಂದ ಕೈಬಿಡಲು ಸರ್ಕಾರ ಗುರಿ ಇಟ್ಟಿದೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಬಳಿಕವೂ ಯೋಜನೆಗಳು ಮುಂದುವರಿಯುತ್ತವೆಯೇ ಎಂಬ ನಾಲ್ಕು ಪ್ರಶ್ನೆಗಳಿಗೆ ಕಾಂಗ್ರೆಸ್ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.

ಬಡವರ ಬದುಕು ಮತ್ತು ಸ್ವಾಭಿಮಾನದೊಂದಿಗೆ ರಾಜಕೀಯ ಆಟ ಆಡುವುದು ಅಪಾಯಕಾರಿ ಎಂದು ಎಚ್ಚರಿಸಿದ ಅವರು, “ಗ್ಯಾರೆಂಟಿ” ಹೆಸರಿನಲ್ಲಿ ಮತ ಪಡೆದು ಅಧಿಕಾರಕ್ಕೆ ಬಂದ ಬಳಿಕ ಅದೇ ಜನರನ್ನು ಅನುಮಾನಿತರಂತೆ ಕಾಣುವುದು ಕನ್ನಡಿಗರಿಗೆ, ವಿಶೇಷವಾಗಿ ಮಹಿಳೆಯರಿಗೆ ಮಾಡುವ ಅಪಮಾನವಾಗಿದೆ ಎಂದು ಆರೋಪಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande