ಅಗ್ರಿ ಸ್ಟಾರ್ಟ್ಅಪ್ ಗಳು ಭವಿಷ್ಯದ ದಿಕ್ಕು : ಸಚಿವ ಚಲುವರಾಯಸ್ವಾಮಿ
ಬೆಂಗಳೂರು, 26 ಮೇ (ಹಿ.ಸ.) : ಆ್ಯಂಕರ್ : ಬೆಂಗಳೂರು ನಗರದ ಜಿಕೆವಿಜೆ ಆವರಣದಲ್ಲಿ ನಡೆದ ‘ಅಗ್ರಿ ಸ್ಟಾರ್ಟ್ಅಪ್ ಕಾನ್ಕ್ಲೇವ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೃಷಿ ಕ್ಷೇತ್ರದ ನವೀನತೆ, ತಂತ್ರಜ್ಞಾನ ಆಧಾರಿತ ಬೆಳವಣಿಗೆ ಹಾಗೂ ಭವಿಷ್ಯದ ಕೃಷಿ ದಿಕ್ಸೂಚಿಗಳ ಕುರ
ಚಲುವರಾಯಸ್ವಾಮಿ


ಬೆಂಗಳೂರು, 26 ಮೇ (ಹಿ.ಸ.) :

ಆ್ಯಂಕರ್ : ಬೆಂಗಳೂರು ನಗರದ ಜಿಕೆವಿಜೆ ಆವರಣದಲ್ಲಿ ನಡೆದ ‘ಅಗ್ರಿ ಸ್ಟಾರ್ಟ್ಅಪ್ ಕಾನ್ಕ್ಲೇವ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೃಷಿ ಕ್ಷೇತ್ರದ ನವೀನತೆ, ತಂತ್ರಜ್ಞಾನ ಆಧಾರಿತ ಬೆಳವಣಿಗೆ ಹಾಗೂ ಭವಿಷ್ಯದ ಕೃಷಿ ದಿಕ್ಸೂಚಿಗಳ ಕುರಿತು ಮಾತನಾಡಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವರು, ಕರ್ನಾಟಕವು ಕೃಷಿ ನವೀನತೆ, ಕೃಷಿ ಉದ್ಯಮಶೀಲತೆ ಹಾಗೂ ಸುಸ್ಥಿರ ಕೃಷಿ ಕ್ಷೇತ್ರಗಳಲ್ಲಿ ದೇಶದಲ್ಲೇ ಪ್ರಮುಖ ರಾಜ್ಯವಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.

ರಾಜ್ಯದಲ್ಲಿರುವ ಪ್ರಮುಖ ಕೃಷಿ ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್ಅಪ್ ಗಳು, ಇಂಕ್ಯೂಬೇಶನ್ ಕೇಂದ್ರಗಳು ಹಾಗೂ ಪ್ರಗತಿಪರ ರೈತರ ಬಲಿಷ್ಠ ಜಾಲವು ತಂತ್ರಜ್ಞಾನ ಆಧಾರಿತ ಕೃಷಿ ಪರಿವರ್ತನೆಗೆ ಬಲ ನೀಡುತ್ತಿದೆ ಎಂದು ತಿಳಿಸಿದರು.

ಇಂದಿನ ಯುವಕರು ಹಾಗೂ ಕೃಷಿ ಪದವೀಧರರು ಕೇವಲ ಉದ್ಯೋಗ ಹುಡುಕುವವರಾಗಿರದೆ, ಉದ್ಯೋಗ ಸೃಷ್ಟಿಕರ್ತರಾಗಬೇಕು ಎಂಬುದು ಕಾಲದ ಅಗತ್ಯವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ರೈತ ಉತ್ಪಾದಕರ ಸಂಘಟನೆಗಳು ಮತ್ತು ರೈತ ಗುಂಪುಗಳು ಸ್ಟಾರ್ಟ್ಅಪ್ ಗಳೊಂದಿಗೆ ಕೈಜೋಡಿಸಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ನೇರ ಮಾರುಕಟ್ಟೆ ಸಂಪರ್ಕದ ಮೂಲಕ ರೈತರ ಆದಾಯ ಹೆಚ್ಚಳವಾಗಲಿದೆ ಎಂದರು.

ಸುಸ್ಥಿರ ಕೃಷಿ, ಕೃಷಿ ಕೌಶಲ್ಯಾಭಿವೃದ್ಧಿ ಹಾಗೂ ನವೀನತೆ ಆಧಾರಿತ ಕೃಷಿ ಬೆಳವಣಿಗೆಗೆ ಕರ್ನಾಟಕ ಸರ್ಕಾರ ಸದಾ ಬೆಂಬಲ ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು. ಭಾರತದ ಭವಿಷ್ಯದ ಬೆಳವಣಿಗೆಯು ಸುಸ್ಥಿರ ಕೃಷಿ, ಸಬಲ ರೈತರು ಮತ್ತು ಗ್ರಾಮೀಣ ಉದ್ಯಮಶೀಲತೆಯ ಮೇಲೆ ಅವಲಂಬಿತವಾಗಿದ್ದು, ಈ ನಿಟ್ಟಿನಲ್ಲಿ ‘ಅಗ್ರಿ ಸ್ಟಾರ್ಟ್ಅಪ್ ಕಾನ್ಕ್ಲೇವ್’ ಮುಂದಿನ ತಲೆಮಾರಿನ ಕೃಷಿಗೆ ದಾರಿದೀಪವಾಗಲಿ ಎಂದು ಹಾರೈಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande