ದಾದಿಯರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು : ಸಚಿವ ದಿನೇಶ್ ಗುಂಡೂರಾವ್
ಸಹಯೋ ಗ
ದಿನಾಚರಣೆ


ಬೆಂಗಳೂರು, 25 ಮೇ (ಹಿ.ಸ.) :

ಆ್ಯಂಕರ್ : ದಾದಿಯರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ಆಸ್ಪತ್ರೆಗಳ ಸಮರ್ಪಕ ಕಾರ್ಯನಿರ್ವಹಣೆಯಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಶುಶ್ರೂಷಕ ಶಿಕ್ಷಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನರ್ಸ್ ವೃತ್ತಿ ಅತ್ಯಂತ ಸಂಕೀರ್ಣ ಮತ್ತು ಜವಾಬ್ದಾರಿಯುತ ವೃತ್ತಿಯಾಗಿದ್ದು, ರೋಗಿಗಳ ಆರೈಕೆಯಲ್ಲಿ ನರ್ಸ್ ಗಳ ವರ್ತನೆ ಮತ್ತು ಸೇವಾಭಾವನೆ ಬಹುಮುಖ್ಯವಾಗುತ್ತದೆ ಎಂದು ಸಚಿವರು ಹೇಳಿದರು.

“ಅನೇಕ ಸಂದರ್ಭಗಳಲ್ಲಿ ನರ್ಸ್ಗಳ ಮಾತು ಹಾಗೂ ವರ್ತನೆಯೇ ರೋಗಿಗಳಿಗೆ ಧೈರ್ಯ ತುಂಬುತ್ತದೆ. ಆರೋಗ್ಯ ಸೇವೆಯಲ್ಲಿ ಮಾನವೀಯತೆ ಅತ್ಯಗತ್ಯ” ಎಂದು ಅವರು ತಿಳಿಸಿದರು.

ನರ್ಸ್ ತರಬೇತಿಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಸಂಖ್ಯೆಯಿಗಿಂತ ಗುಣಮಟ್ಟದ ನರ್ಸ್ಗಳನ್ನು ರೂಪಿಸುವುದು ಮುಖ್ಯ ಎಂದರು.

ಒಳ್ಳೆಯ ನರ್ಸ್ ಆಗಲು ನಾಯಕತ್ವ ಗುಣ, ಮಾತೃಹೃದಯ, ಅನುಕಂಪ, ಸಮಯೋಚಿತ ನಿರ್ಧಾರ ಸಾಮರ್ಥ್ಯ ಹಾಗೂ ಕ್ರಿಟಿಕಲ್ ವಿಶ್ಲೇಷಣಾ ಸಾಮರ್ಥ್ಯ ಅಗತ್ಯ ಎಂದು ಹೇಳಿದರು.

ನರ್ಸ್ ವೃತ್ತಿಯಲ್ಲಿ ಮಾನಸಿಕ ದೃಢತೆ ಅತ್ಯಗತ್ಯವಾಗಿದ್ದು, ಕಡಿಮೆ ಸಂಬಳ, ಅನಿಯಮಿತ ಕೆಲಸದ ಅವಧಿ ಸೇರಿದಂತೆ ಹಲವು ಸವಾಲುಗಳನ್ನು ನರ್ಸ್ಗಳು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದ ಮಟ್ಟದಲ್ಲಿ ಗಮನ ಹರಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ಕರ್ನಾಟಕವು ನರ್ಸ್ ತರಬೇತಿ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದ ಅವರು, ಎಲ್ಲಾ ದಾದಿಯರಿಗೆ ವಿಶ್ವ ದಾದಿಯರ ದಿನದ ಶುಭಾಶಯಗಳನ್ನು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande