108 ಆಂಬ್ಯುಲನ್ಸ್ ಸೇವೆ ಇನ್ನು ಮುಂದೆ ಸರ್ಕಾರದ ಸುಪರ್ದಿಯಲ್ಲಿ : ದಿನೇಶ್ ಗುಂಡೂರಾವ್
ಬೆಂಗಳೂರು, 25 ಮೇ (ಹಿ.ಸ.) : ಆ್ಯಂಕರ್ : ರಾಜ್ಯದ ತುರ್ತು ವೈದ್ಯಕೀಯ ಸೇವೆಯಲ್ಲಿ ಮಹತ್ವದ ಬದಲಾವಣೆಗೆ ಚಾಲನೆ ನೀಡಿರುವ ಕರ್ನಾಟಕ ಸರ್ಕಾರ, 108 ಆಂಬ್ಯುಲನ್ಸ್ ಸೇವೆಯನ್ನು ಇನ್ನು ಮುಂದೆ ಸಂಪೂರ್ಣವಾಗಿ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗ
ಗುಂಡೂರಾವ್


ಬೆಂಗಳೂರು, 25 ಮೇ (ಹಿ.ಸ.) :

ಆ್ಯಂಕರ್ : ರಾಜ್ಯದ ತುರ್ತು ವೈದ್ಯಕೀಯ ಸೇವೆಯಲ್ಲಿ ಮಹತ್ವದ ಬದಲಾವಣೆಗೆ ಚಾಲನೆ ನೀಡಿರುವ ಕರ್ನಾಟಕ ಸರ್ಕಾರ, 108 ಆಂಬ್ಯುಲನ್ಸ್ ಸೇವೆಯನ್ನು ಇನ್ನು ಮುಂದೆ ಸಂಪೂರ್ಣವಾಗಿ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದರು.

ಬೆಂಗಳೂರಿನಲ್ಲಿ ಆಯೋಜಿಸಿದ್ದ ಅತ್ಯಾಧುನಿಕ ಸಮಗ್ರ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ” ಎಂಬ ಘೋಷವಾಕ್ಯದಡಿ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಈ ಸೇವೆಯನ್ನು ನೇರವಾಗಿ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಯೋಜನೆ ಜಾರಿಗೆ ಬಂದಿದ್ದು, 2025-26ನೇ ಸಾಲಿನ ಬಜೆಟ್ನಲ್ಲಿ 108 ಸೇವೆಯ ಉನ್ನತೀಕರಣ ಘೋಷಣೆ ಮಾಡಲಾಗಿತ್ತು ಎಂದು ಸಚಿವರು ಹೇಳಿದರು.

2008ರಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಆರಂಭವಾದ 108 ಆಂಬ್ಯುಲನ್ಸ್ ಸೇವೆಯನ್ನು ಈವರೆಗೆ ಖಾಸಗಿ ಸಂಸ್ಥೆ ನಿರ್ವಹಿಸುತ್ತಿತ್ತು. ಆದರೆ ಕಾರ್ಯನಿರ್ವಹಣೆಯಲ್ಲಿ ಹಲವು ಸಮಸ್ಯೆಗಳು ಎದುರಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರವೇ ನೇರವಾಗಿ ನಿರ್ವಹಣೆ ವಹಿಸಿಕೊಳ್ಳಲು ತೀರ್ಮಾನಿಸಿತು ಎಂದು ವಿವರಿಸಿದರು.

ಈ ಸಂಬಂಧ ಸಿಂಗಪೂರ್ ಸೇರಿದಂತೆ ಹಲವು ದೇಶಗಳ ಮಾದರಿಗಳನ್ನು ಅಧ್ಯಯನ ಮಾಡಲಾಗಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಬಳಿಕ ಸರ್ಕಾರಿ ಸ್ವಾಮ್ಯದ ಸಿ-ಡಾಕ್ ಸಂಸ್ಥೆ ಅಗತ್ಯ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ್ದು, ಇದೀಗ ರಾಜ್ಯ ಮಟ್ಟದಲ್ಲಿ ಅತ್ಯಾಧುನಿಕ 24/7 ಕಮಾಂಡ್ ಮತ್ತು ಕಂಟ್ರೋಲ್ ರೂಂ ಕಾರ್ಯಾರಂಭ ಮಾಡಿದೆ ಎಂದು ತಿಳಿಸಿದರು.

ಹೊಸ ವ್ಯವಸ್ಥೆಯಲ್ಲಿ ಆಂಬ್ಯುಲನ್ಸ್ ಟ್ರ್ಯಾಕಿಂಗ್ ವ್ಯವಸ್ಥೆ, MDT ಸಾಧನದ ಮೂಲಕ ತುರ್ತು ಸಂದರ್ಭದಲ್ಲೇ ವೈದ್ಯರನ್ನು ಸಂಪರ್ಕಿಸುವ ಸೌಲಭ್ಯ, ಆಸ್ಪತ್ರೆಗೆ ಮುಂಚಿತ ಮಾಹಿತಿ ರವಾನಿಸುವ ವ್ಯವಸ್ಥೆ, ರೋಗಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಸೂಕ್ತ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಸೇರಿದಂತೆ ಅನೇಕ ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಜೊತೆಗೆ ಇಂಧನ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಫ್ಯೂಯಲ್ ಗೇಜ್ ವ್ಯವಸ್ಥೆಯನ್ನೂ ಸೇರಿಸಲಾಗಿದೆ.

ರಾಜ್ಯದ ಎಲ್ಲಾ ಆಂಬ್ಯುಲನ್ಸ್ಗಳು ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆಯಡಿ ಕಾರ್ಯನಿರ್ವಹಿಸಲಿದ್ದು, ಟೆಲಿ-ಮನಸ್, ಇ-ಸಂಜೀವಿನಿ, ಮಹಿಳಾ ಮತ್ತು ಮಕ್ಕಳ ಸಹಾಯವಾಣಿಗಳನ್ನು ಸಹ ಇದರೊಂದಿಗೆ ಏಕೀಕರಿಸಲಾಗಿದೆ. ಸಾರ್ವಜನಿಕ ಆರೋಗ್ಯ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿ ಹಾಗೂ ವೇಗವಾಗಿಸಲು ಇದು ಮಹತ್ವದ ಹೆಜ್ಜೆಯಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande