ಗ್ರಾಮೀಣ ನೀರಿನ ಸಮಸ್ಯೆಗೆ ನವ ತಂತ್ರಜ್ಞಾನ ಅಳವಡಿಕೆಗೆ ಸರ್ಕಾರ ಚಿಂತನೆ : ಸಚಿವ ಖರ್ಗೆ
ಬೆಂಗಳೂರು, 20 ಮೇ (ಹಿ.ಸ.) : ಆ್ಯಂಕರ್ : ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಜಲಕ್ಷಾಮ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ನವೀನ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಗ್ರಾಮೀಣಾಭಿ
Water meeting


ಬೆಂಗಳೂರು, 20 ಮೇ (ಹಿ.ಸ.) :

ಆ್ಯಂಕರ್ : ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಜಲಕ್ಷಾಮ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ನವೀನ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈಗಾಗಲೇ ಗ್ರಾಮೀಣ ಜಲಮೂಲಗಳ ಪುನರುಜ್ಜೀವನ, ಕೆರೆಗಳ ಸಂರಕ್ಷಣೆ ಹಾಗೂ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಕೊಳವೆಬಾವಿಗಳ ಜಲ ಮರುಪೂರಣಕ್ಕಾಗಿ ‘ಸ್ಪಾಂಜ್ ಜೋನ್’ ತಂತ್ರಜ್ಞಾನ ಅಳವಡಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ತಂತ್ರಜ್ಞಾನದ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಿ, ಬತ್ತಿ ಹೋಗುತ್ತಿರುವ ಕೊಳವೆಬಾವಿಗಳಿಗೆ ಮರುಜೀವ ನೀಡಬಹುದಾಗಿದೆ. ಪ್ರಸ್ತಾವಿತ ಮಾದರಿಯ ಪ್ರಕಾರ, ಒಂದು ಗ್ರಾಮದ ಸಂಪೂರ್ಣ ನೀರಿನ ಅಗತ್ಯ ಪೂರೈಸಲು ಕೇವಲ ಒಂದು ಮರುಪೂರಣ ಘಟಕ ಸಾಕಾಗುವ ಸಾಧ್ಯತೆ ಇದೆ ಎಂದು ತಾಂತ್ರಿಕ ಅಧ್ಯಯನಗಳಿಂದ ತಿಳಿದುಬಂದಿದೆ.

ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಮೂಲಕ ‘ಗ್ರ್ಯಾಂಡ್ ಚಾಲೆಂಜ್’ ಸ್ಪರ್ಧೆ ಆಯೋಜಿಸಿ, ಹೊಸ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಅಭಾವ ಎದುರಿಸುವ ಗ್ರಾಮಗಳನ್ನು ಗುರುತಿಸಿ, ಅಲ್ಲಿ ಈ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಜಾರಿಗೆ ತರುವ ಉದ್ದೇಶವಿದೆ. ಯೋಜನೆಯ ಕಾರ್ಯಸಾಧ್ಯತೆ, ಪರಿಣಾಮಕಾರಿತ್ವ ಹಾಗೂ ಸಾಧಕ-ಬಾಧಕಗಳ ಕುರಿತು ಸಮಗ್ರ ಅಧ್ಯಯನ ನಡೆಸಲು ತಜ್ಞರನ್ನು ಒಳಗೊಂಡ ವಿಶೇಷ ತಾಂತ್ರಿಕ ಸಮಿತಿಯನ್ನು ರಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ತಾಂತ್ರಿಕ ಸಮಿತಿಯ ವರದಿ ಬಂದ ನಂತರ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಗ್ರಾಮೀಣ ಪ್ರದೇಶಗಳಲ್ಲಿ ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande