ನರೇಗಾ ಕಾಮಗಾರಿಯಲ್ಲಿ ನಿಯಮಬದ್ಧ ಕೆಲಸ ನಿರ್ವಹಿಸಿ ಪೂರ್ಣ ಕೂಲಿ ಪಡೆಯಿರಿ : ಕಾರ್ಮಿಕರಿಗೆ ಸಲಹೆ
ಗದಗ, 20 ಮೇ (ಹಿ.ಸ.) : ಆ್ಯಂಕರ್ : ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ದೊಡ್ಡ
ಫೋಟೋ


ಗದಗ, 20 ಮೇ (ಹಿ.ಸ.) :

ಆ್ಯಂಕರ್ : ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ದೊಡ್ಡಮನಿ ಅವರು ಕಡಕೋಳ ಹಾಗೂ ಛಬ್ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಪ್ರಗತಿಯಲ್ಲಿರುವ ಸಮುದಾಯ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾಮಗಾರಿಯಲ್ಲಿ ತೊಡಗಿದ್ದ ನರೇಗಾ ಕೂಲಿ ಕಾರ್ಮಿಕರೊಂದಿಗೆ ನೇರವಾಗಿ ಸಂವಾದ ನಡೆಸಿ, ಕೆಲಸದ ವಿಧಾನ, ಕೂಲಿ ಪಾವತಿ ವ್ಯವಸ್ಥೆ ಹಾಗೂ ಕಾರ್ಮಿಕರ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು.

ಕೂಲಿಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಕಾರ್ಮಿಕರು ಅಳತೆಗೆ ಅನುಗುಣವಾಗಿ ಕೆಲಸ ನಿರ್ವಹಿಸಿದರೆ ಪ್ರತಿಯೊಬ್ಬರಿಗೂ 370 ರೂ.ಗಳವರೆಗೆ ಕೂಲಿ ದೊರೆಯುತ್ತದೆ ಎಂದು ತಿಳಿಸಿದರು. ಸರ್ಕಾರದ ಮಾರ್ಗಸೂಚಿಯಂತೆ ಕೆಲಸದ ಪ್ರಮಾಣ ಪೂರ್ಣಗೊಳಿಸುವುದು ಅಗತ್ಯವಾಗಿದ್ದು, ನಿಯಮಾನುಸಾರ ಕೆಲಸ ಮಾಡಿದವರಿಗೆ ಮಾತ್ರ ಸಂಪೂರ್ಣ ಕೂಲಿ ಪಾವತಿಯಾಗುತ್ತದೆ ಎಂದು ಹೇಳಿದರು.

ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಅಂಗವಿಕಲರಿಗೆ ಕೆಲಸದ ಪ್ರಮಾಣದಲ್ಲಿ ಸರ್ಕಾರದಿಂದ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಆದ್ದರಿಂದ ಅವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ನಿರ್ವಹಿಸಿ ಯೋಜನೆಯ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಮಿಕರು ಕೆಲಸದ ಸ್ಥಳದಲ್ಲಿ ಎರಡು ಬಾರಿ ಹಾಜರಾತಿ ದಾಖಲಿಸುವುದು ಕಡ್ಡಾಯ ಎಂಬುದನ್ನು ಸ್ಪಷ್ಟಪಡಿಸಿದ ಅವರು, ಬೆಳಿಗ್ಗೆ ಮತ್ತು ಕೆಲಸ ಮುಗಿದ ನಂತರ ಎರಡು ಬಾರಿ ಹಾಜರಾತಿ ದಾಖಲಿಸದಿದ್ದರೆ ಕೂಲಿ ಹಣ ಜಮೆಯಾಗುವುದಿಲ್ಲ ಎಂದು ಎಚ್ಚರಿಸಿದರು. ಹೀಗಾಗಿ ಎಲ್ಲರೂ ನಿಯಮಬದ್ಧವಾಗಿ ಕೆಲಸ ನಿರ್ವಹಿಸಿ, ಹಾಜರಾತಿಯನ್ನು ಸರಿಯಾಗಿ ದಾಖಲಿಸಿ ಸರ್ಕಾರದ ಕೂಲಿ ಸೌಲಭ್ಯವನ್ನು ಪಡೆಯಬೇಕು ಎಂದು ಹೇಳಿದರು.

“ಕೂಲಿಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಬೆಳಗಿನ ವೇಳೆಯಲ್ಲೇ ಕೆಲಸದ ಸ್ಥಳಕ್ಕೆ ಆಗಮಿಸಿ, ನಿಗದಿತ ಪ್ರಮಾಣದ ಕೆಲಸವನ್ನು ಪೂರ್ಣಗೊಳಿಸಿ, ಸಮಯಕ್ಕೆ ಸರಿಯಾಗಿ ಹಾಜರಾತಿ ನೀಡಿ ಮನೆಗೆ ತೆರಳಬೇಕು. ಇದರಿಂದ ಆರೋಗ್ಯವೂ ಕಾಪಾಡಿಕೊಳ್ಳಬಹುದು ಹಾಗೂ ಕೂಲಿ ಹಣವೂ ಸಮಯಕ್ಕೆ ಲಭ್ಯವಾಗುತ್ತದೆ” ಎಂದು ಆರ್.ವಿ. ದೊಡ್ಡಮನಿ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಕೂಲಿಯಿಂದ ದೊರೆಯುವ ಆದಾಯವನ್ನು ಅನಗತ್ಯ ಖರ್ಚುಗಳಿಗೆ ಬಳಸದೆ, ಕೃಷಿ ಚಟುವಟಿಕೆಗಳು, ಮಕ್ಕಳ ಶಿಕ್ಷಣ, ಕುಟುಂಬದ ಅಗತ್ಯತೆಗಳು ಹಾಗೂ ಜೀವನಮಟ್ಟ ಸುಧಾರಣೆಗೆ ಬಳಸಿಕೊಳ್ಳುವಂತೆ ಕಾರ್ಮಿಕರಿಗೆ ಮನವಿ ಮಾಡಿದರು.

ಗ್ರಾಮೀಣಾಭಿವೃದ್ಧಿ ಯೋಜನೆಗಳ ಯಶಸ್ಸಿಗೆ ಕಾರ್ಮಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಜವಾಬ್ದಾರಿಯುತ ಕೆಲಸ ಅತ್ಯಂತ ಮುಖ್ಯವಾಗಿದ್ದು, ನರೇಗಾ ಯೋಜನೆ ಗ್ರಾಮೀಣ ಜನರ ಆರ್ಥಿಕ ಸದೃಢತೆಗೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕಾಮಗಾರಿ ಪರಿಶೀಲನೆ ವೇಳೆ ಕಡಕೋಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಮಾಳವಾಡ, ಛಬ್ಬಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಜಾತಾ ಕಪ್ಪಲಿ, ಟಿಐಇಸಿ ವೀರೇಶ್ ಪಟ್ಟಣಶೆಟ್ಟಿ, ತಾಂತ್ರಿಕ ಸಹಾಯಕ ಆಂಜನೇಯ, ಲಿಂಗರಾಜ, ಬಿಎಫ್ಟಿ, ಡಿಇಒ, ಕಾಯಕಬಂಧುಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ನರೇಗಾ ಕೂಲಿಕಾರ್ಮಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande