ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಭೂಕುಸಿತ ; ರಾತ್ರಿಯಿಡೀ ರಕ್ಷಣಾ ಕಾರ್ಯ
ರಿ
Rescue


ಕೇದಾರನಾಥ, 20 ಮೇ (ಹಿ.ಸ.) :

ಆ್ಯಂಕರ್ : ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಸೋನಪ್ರಯಾಗ–ಗೌರಿಕುಂಡ ಮಾರ್ಗದ ಮೂರು ಕಡೆ ಭೂಕುಸಿತ ಸಂಭವಿಸಿ ಯಾತ್ರೆಗೆ ತಾತ್ಕಾಲಿಕ ಅಡಚಣೆ ಉಂಟಾಯಿತು. ಆದರೆ ಜಿಲ್ಲಾಡಳಿತ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ಪೊಲೀಸ್ ಇಲಾಖೆಯ ತ್ವರಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದ್ದು, ಸಾವಿರಾರು ಭಕ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಜಿಲ್ಲಾಡಳಿತದ ಮಾಹಿತಿ ಪ್ರಕಾರ, ಮೇ 19ರವರೆಗೆ 6.94 ಲಕ್ಷಕ್ಕೂ ಅಧಿಕ ಭಕ್ತರು ಬಾಬಾ ಕೇದಾರನಾಥ ದರ್ಶನ ಪಡೆದಿದ್ದಾರೆ. ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಯಾತ್ರಾ ಮಾರ್ಗದಲ್ಲಿ ಮಣ್ಣು ಮತ್ತು ಕಲ್ಲುಗಳು ಜಾರಿಬಿದ್ದು ವಾಹನ ಹಾಗೂ ಪಾದಚಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ವಿಶಾಲ್ ಮಿಶ್ರಾ ವಿಡಿಯೊ ಕಾನ್ಫರೆನ್ಸ್ ಮೂಲಕ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಿ, ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸವಾಲಿನ ಪರಿಸ್ಥಿತಿಯ ನಡುವೆಯೂ ರಕ್ಷಣಾ ಪಡೆಗಳು ಸುಮಾರು 30 ನಿಮಿಷಗಳಲ್ಲಿ ಪಾದಚಾರಿ ಮಾರ್ಗವನ್ನು ಭಾಗಶಃ ಸಂಚಾರಯೋಗ್ಯವಾಗಿಸಿವೆ. ಬಳಿಕ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಯಾತ್ರಿಕರನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲಾಯಿತು.

ನಂತರ ಜೆಸಿಬಿ ಯಂತ್ರಗಳ ಸಹಾಯದಿಂದ ಮಣ್ಣು ಮತ್ತು ಅವಶೇಷಗಳನ್ನು ತೆರವುಗೊಳಿಸಿ ಮಾರ್ಗವನ್ನು ಪುನಃ ತೆರೆಯಲಾಯಿತು. ಯಾತ್ರಿಕರ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ನಿರಂತರ ನಿಗಾ ಮತ್ತು ಪರಿಹಾರ ಕಾರ್ಯ ಮುಂದುವರಿಸಲಾಗಿದೆ ಎಂದು ಆಡಳಿತ ತಿಳಿಸಿದೆ.

ಪ್ರಸ್ತುತ ಯಾತ್ರೆಯನ್ನು ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದ್ದು, ಹವಾಮಾನ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande