
ಗದಗ, 20 ಮೇ (ಹಿ.ಸ.) :
ಆ್ಯಂಕರ್ : 2023ರ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷಗಳು ಪೂರ್ಣಗೊಂಡಿದ್ದು, ಈ ಅವಧಿಯ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಭಾಗ್ಯಗಳ ಆಸೆ ತೋರಿಸಿ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ರಾಜ್ಯದ ಅಭಿವೃದ್ಧಿಗೆ ಯಾವುದೇ ಗಮನ ನೀಡಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ತನ್ನ ಮೂರು ವರ್ಷದ ಆಡಳಿತದಲ್ಲಿ ಗ್ಯಾರಂಟಿ ಯೋಜನೆಗಳನ್ನೇ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ ಅಭಿವೃದ್ಧಿ ವಿಷಯಕ್ಕೆ ಬಂದರೆ ಸರ್ಕಾರದ ಸಾಧನೆ ಶೂನ್ಯವಾಗಿದೆ. ರಾಜ್ಯದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ ಎಂದು ಅವರು ಆರೋಪಿಸಿದರು.
ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರ ಬದುಕು ದುಬಾರಿಯಾಗಿದೆ ಎಂದು ಆರೋಪಿಸಿದ ಹಿರೇಮಠ, ಮೊದಲು 5 ರೂಪಾಯಿಗೆ ದೊರೆಯುತ್ತಿದ್ದ ಜನನ–ಮರಣ ಪ್ರಮಾಣಪತ್ರದ ಶುಲ್ಕವನ್ನು 50 ರೂಪಾಯಿಗೆ ಹೆಚ್ಚಿಸಲಾಗಿದೆ. 20 ರೂಪಾಯಿಗೆ ದೊರೆಯುತ್ತಿದ್ದ ಛಾಪಾ ಕಾಗದದ ದರವನ್ನು 100 ರೂಪಾಯಿಗೆ ಏರಿಸಲಾಗಿದ್ದು, 100 ರೂಪಾಯಿ ಮೌಲ್ಯದ ಛಾಪಾ ಕಾಗದದಲ್ಲಿ ನೋಂದಣಿ ವೆಚ್ಚವನ್ನು 500 ರೂಪಾಯಿವರೆಗೆ ಹೆಚ್ಚಿಸಲಾಗಿದೆ ಎಂದು ದೂರಿದರು.
ಇದರ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಎರಡು ಬಾರಿ ಹೆಚ್ಚಿಸಲಾಗಿದ್ದು, ಹಾಲಿನ ದರವನ್ನು ಮೂರು ಬಾರಿ ಏರಿಸಲಾಗಿದೆ. ವಿದ್ಯುತ್ ಶುಲ್ಕದಲ್ಲೂ ಏರಿಕೆ ಮಾಡಲಾಗಿದ್ದು, ಒಟ್ಟಾರೆ 75ಕ್ಕೂ ಹೆಚ್ಚು ವಸ್ತುಗಳ ಬೆಲೆ ಹೆಚ್ಚಿಸಿರುವುದೇ ಸರ್ಕಾರದ ಪ್ರಮುಖ ಸಾಧನೆಯಾಗಿದೆ ಎಂದು ಟೀಕಿಸಿದರು.
ಮೂರು ವರ್ಷಗಳ ಆಡಳಿತ ಅವಧಿಯಲ್ಲಿ ಬಡವರಿಗೆ ಹೊಸ ಮನೆಗಳನ್ನು ನೀಡಿಲ್ಲ, ಹೊಸ ರಸ್ತೆ ನಿರ್ಮಾಣವಾಗಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಔಷಧಿಗಳ ಕೊರತೆ ಮುಂದುವರಿದಿದೆ ಎಂದು ಆರೋಪಿಸಿದ ಅವರು, ಹೊಸ ಶಾಲಾ ಕಟ್ಟಡಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಹಾಗೂ ಶಿಕ್ಷಕರ ನೇಮಕಾತಿಯೂ ನಡೆದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಎಲ್ಲೆಡೆ ಭ್ರಷ್ಟಾಚಾರ ತಲೆದೋರಿದೆ. ದೇಶದಲ್ಲೇ ಅತಿ ಹೆಚ್ಚು ಸಾಲ ಮಾಡಿದ ರಾಜ್ಯಗಳಲ್ಲಿ ಕರ್ನಾಟಕ ಪ್ರಮುಖ ಸ್ಥಾನದಲ್ಲಿದ್ದು, ಈ ಸಾಲದ ಹೊರೆ ಮುಂದಿನ ಸರ್ಕಾರದ ಮೇಲೆ ಬೀಳಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ರೈತರ ವಿಚಾರದಲ್ಲಿ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ ಹಿರೇಮಠ, ರೈತಪರ ವಿಶೇಷ ಯೋಜನೆಗಳನ್ನು ಜಾರಿಗೆ ತರದೇ, ರೈತರ ಮಕ್ಕಳ ವಿದ್ಯಾನಿಧಿ ಯೋಜನೆಯನ್ನು ರದ್ದುಪಡಿಸಲಾಗಿದೆ ಎಂದು ಹೇಳಿದರು. ಕೃಷಿಗೆ ಅಗತ್ಯ ನೀರಿನ ಕೊರತೆ, ರೈತರ ಆತ್ಮಹತ್ಯೆ ಪ್ರಕರಣಗಳ ಏರಿಕೆ ಹಾಗೂ ರೈತವಿರೋಧಿ ನೀತಿಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.
ಉದ್ಯೋಗ ಸೃಷ್ಟಿ ಹಾಗೂ ನೇಮಕಾತಿ ವಿಚಾರದಲ್ಲೂ ಸರ್ಕಾರ ವಿಫಲವಾಗಿದೆ. ಹೊಸ ನೇಮಕಾತಿಗಳು ನಡೆಯುತ್ತಿಲ್ಲ. ತಳ ಸಮುದಾಯಗಳಿಗೆ ನ್ಯಾಯ ಒದಗಿಸುವಲ್ಲಿ ಸರ್ಕಾರ ಹಿನ್ನಡೆ ಅನುಭವಿಸಿದ್ದು, ದಲಿತ ಸಮುದಾಯಕ್ಕೆ ಮೀಸಲಾದ ಅನುದಾನ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಡ್ರಗ್ಸ್ ದಂಧೆ, ಕೊಲೆ, ಸುಲಿಗೆ ಹಾಗೂ ಸಮಾಜಘಾತುಕ ಚಟುವಟಿಕೆಗಳು ಹೆಚ್ಚುತ್ತಿವೆ. ಜೈಲುಗಳಲ್ಲಿ ಅಪರಾಧಿಗಳಿಗೆ ರಾಜಾತಿಥ್ಯ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಟೀಕಿಸಿದರು.
ಇದೇ ವೇಳೆ ಕಳೆದ ಹಲವು ತಿಂಗಳುಗಳಿಂದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಡುವಿನ ಕುರ್ಚಿ ರಾಜಕಾರಣದ ಚರ್ಚೆಗಳು ಸರ್ಕಾರದ ಆಡಳಿತದ ಮೇಲೆ ಪರಿಣಾಮ ಬೀರಿದ್ದು, ಜನಪರ ಆಡಳಿತ ಸಂಪೂರ್ಣ ಹಿನ್ನಡೆ ಅನುಭವಿಸಿದೆ ಎಂದು ಹಿರೇಮಠ ಆರೋಪಿಸಿದರು.
ಭ್ರಷ್ಟಾಚಾರ, ಆಡಳಿತ ವೈಫಲ್ಯ, ಬೆಲೆ ಏರಿಕೆ, ಸಾಲದ ಹೊರೆ, ಕಾನೂನು ಸುವ್ಯವಸ್ಥೆಯ ಹದಗೆಟ್ಟುಹೋಗಿರುವ ಪರಿಸ್ಥಿತಿ ಹಾಗೂ ಅಭಿವೃದ್ಧಿ ಕಾರ್ಯಗಳ ಕೊರತೆಯೇ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಆಡಳಿತದ ನಿಜವಾದ ಚಿತ್ರಣವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ತಮ್ಮ ಹೇಳಿಕೆಯಲ್ಲಿ ವಾಗ್ದಾಳಿ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP