ಯುವಜನರಲ್ಲಿ ಅಹಿಂಸಾ ಚಿಂತನೆ ಬೆಳೆಬೇಕು : ವಿ. ಹರಿನಾಥಬಾಬು
ಗದಗ, 20 ಮೇ (ಹಿ.ಸ.) : ಆ್ಯಂಕರ್ : ಇಂದಿನ ಸಮಾಜ ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವೇ ನಿಜವಾದ ಚಳವಳಿಯ ಆರಂಭವಾಗಿದ್ದು, ಅಹಿಂಸಾ ಮಾರ್ಗದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಚಿಂತನೆ ಯುವಜನಾಂಗದಲ್ಲಿ ಬೆಳೆಬೇಕು ಎಂದು ಚಿಂತಕ ವಿ. ಹರಿನಾಥಬಾಬು ಅಭಿಪ್ರಾಯಪಟ್ಟರು. ಜ
ಫೋಟೋ


ಗದಗ, 20 ಮೇ (ಹಿ.ಸ.) :

ಆ್ಯಂಕರ್ : ಇಂದಿನ ಸಮಾಜ ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವೇ ನಿಜವಾದ ಚಳವಳಿಯ ಆರಂಭವಾಗಿದ್ದು, ಅಹಿಂಸಾ ಮಾರ್ಗದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಚಿಂತನೆ ಯುವಜನಾಂಗದಲ್ಲಿ ಬೆಳೆಬೇಕು ಎಂದು ಚಿಂತಕ ವಿ. ಹರಿನಾಥಬಾಬು ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಯುವ ಸಾಹಿತ್ಯ ಸಮಾವೇಶದ ಅಂಗವಾಗಿ ನಡೆದ “ಯುವಕರು ಮತ್ತು ಚಳವಳಿ” ವಿಷಯದ ಗೋಷ್ಠಿಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ವ್ಯಕ್ತಿಗತ ಜೀವನದ ಒತ್ತಡಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಕಾಳಜಿ ಮತ್ತು ಮಾನವೀಯ ಮೌಲ್ಯಗಳು ಕುಂಠಿತವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.

“ಸಮಾಜದಲ್ಲಿ ನಡೆಯುವ ಅನ್ಯಾಯ, ಅಸಮಾನತೆ, ಶೋಷಣೆ ಹಾಗೂ ಸಂಕಷ್ಟಗಳು ನಮ್ಮ ಬದುಕಿಗೆ ಸಂಬಂಧಿಸಿದುದಲ್ಲ ಎಂಬ ಮನೋಭಾವ ಯುವಕರಲ್ಲಿ ಬೆಳೆಯಬಾರದು. ಬೇರೆಯವರ ನೋವು ನಮ್ಮದಲ್ಲ ಎನ್ನುವ ನಿರ್ಲಿಪ್ತ ಮನೋಭಾವ ಸಮಾಜದ ಆರೋಗ್ಯಕರ ಬೆಳವಣಿಗೆಗೆ ಮಾರಕವಾಗುತ್ತದೆ” ಎಂದು ತಿಳಿಸಿದರು.

ಇಂದಿನ ಯುವಜನಾಂಗವು ಸದಭಿರುಚಿಯ ಸಾಹಿತ್ಯ, ಚಿಂತನಾ ಗ್ರಂಥಗಳು ಹಾಗೂ ಸಾಮಾಜಿಕ ವಿಚಾರಧಾರೆಗಳಿಂದ ದೂರವಾಗುತ್ತಿರುವುದು ಸ್ಪಂದನಾ ಗುಣ ಕ್ಷೀಣಿಸಲು ಕಾರಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಉತ್ತಮ ಸಾಹಿತ್ಯ ಓದುವ ಅಭ್ಯಾಸದಿಂದ ಮಾತ್ರ ಮಾನವೀಯತೆ, ಸಾಮಾಜಿಕ ಹೊಣೆಗಾರಿಕೆ ಮತ್ತು ವಿಮರ್ಶಾತ್ಮಕ ಚಿಂತನೆ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಶಾಲೆ ಹಾಗೂ ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ಓದು, ಚಿಂತನೆ ಮತ್ತು ಚರ್ಚೆಗಳ ವಾತಾವರಣ ನಿರ್ಮಾಣವಾಗಬೇಕು ಎಂದು ಸಲಹೆ ನೀಡಿದ ಅವರು, ಶಿಕ್ಷಣವು ಕೇವಲ ಉದ್ಯೋಗಕೇಂದ್ರಿತವಾಗದೇ ವ್ಯಕ್ತಿತ್ವ ನಿರ್ಮಾಣ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ದಿಕ್ಕಿನಲ್ಲಿ ಸಾಗಬೇಕು ಎಂದು ಅಭಿಪ್ರಾಯಪಟ್ಟರು.

ಗೋಷ್ಠಿಯಲ್ಲಿ ಮಾತನಾಡಿದ ವಿಶಾಲ ಮ್ಯಾಸರ್, ಚಳವಳಿಗಳ ವಿವಿಧ ಸ್ವರೂಪಗಳ ಕುರಿತು ವಿವರಿಸಿದರು. ಪ್ರತಿಭಟನೆ, ದಂಗೆ, ಕ್ರಾಂತಿ ಮುಂತಾದವುಗಳು ಚಳವಳಿಯ ವಿಭಿನ್ನ ರೂಪಗಳಾಗಿದ್ದು, ಅವುಗಳ ಉದ್ದೇಶ ಮತ್ತು ಪರಿಣಾಮಗಳು ಭಿನ್ನವಾಗಿರುತ್ತವೆ ಎಂದು ಹೇಳಿದರು.

“ಕ್ರಾಂತಿ ಎಂದರೆ ಕೇವಲ ವಿರೋಧ ವ್ಯಕ್ತಪಡಿಸುವ ಪ್ರಕ್ರಿಯೆಯಲ್ಲ; ಅದು ಹಳೆಯ ವ್ಯವಸ್ಥೆಯನ್ನು ಬದಲಿಸಿ ಹೊಸ ಆದರ್ಶ ಸಮಾಜವನ್ನು ನಿರ್ಮಿಸುವ ಚಿಂತನೆಯಾಗಿದೆ. ಯುವಕರು ಕೇವಲ ಪ್ರತಿಭಟನೆಗೆ ಸೀಮಿತವಾಗದೇ, ಸಮಾಜಮುಖಿ ಹಾಗೂ ಜನಪರ ಉದ್ದೇಶಗಳಿಗಾಗಿ ಚಳವಳಿಯ ಅಸ್ತ್ರವನ್ನು ಬಳಸಬೇಕು” ಎಂದು ಕರೆ ನೀಡಿದರು.

ಚಿಂತಕ ಸಂತೋಷ ಅಂಗಡಿ ಮಾತನಾಡಿ, ಸಾಹಿತ್ಯ ಮತ್ತು ಚಳವಳಿಗಳ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಿದರು. “ಸಾಹಿತ್ಯವೂ ಚಳವಳಿಯ ಭಾಗವಾಗಿಯೇ ರೂಪುಗೊಂಡಿದೆ. ಕನ್ನಡ ಸಾಹಿತ್ಯದಲ್ಲಿ ನವೋದಯ, ನವ್ಯ, ದಲಿತ ಹಾಗೂ ಬಂಡಾಯ ಸಾಹಿತ್ಯಗಳು ಸಾಮಾಜಿಕ ಬದಲಾವಣೆಯ ಧ್ವನಿಯಾಗಿ ಹೊರಹೊಮ್ಮಿವೆ. ಇವುಗಳ ಜೊತೆಗೆ ರೈತ ಚಳವಳಿ, ನದಿನೀರು ಹೋರಾಟ, ಸಾಮಾಜಿಕ ನ್ಯಾಯದ ಚಳವಳಿಗಳ ಐತಿಹಾಸಿಕ ಹಿನ್ನೆಲೆ ಯುವಜನತೆಗೆ ಸಮಾಜದ ವಾಸ್ತವಿಕತೆ ಪರಿಚಯಿಸುತ್ತದೆ” ಎಂದು ಹೇಳಿದರು.

ಯುವಕರು ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಹಿತ್ಯದ ಅಧ್ಯಯನ ಅಗತ್ಯವಾಗಿದ್ದು, ಚಿಂತನೆ ಮತ್ತು ಸಂವಾದಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಚಟುವಟಿಕೆಯಿಂದ ಭಾಗವಹಿಸಿ, ವಿವಿಧ ಸಾಮಾಜಿಕ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಿ ಸಂವಾದ ನಡೆಸಿದರು. ಗೋಷ್ಠಿಯು ಯುವಜನರಲ್ಲಿ ಚಳವಳಿಗಳ ಸ್ವರೂಪ, ಸಾಮಾಜಿಕ ಹೊಣೆಗಾರಿಕೆ ಹಾಗೂ ಅಹಿಂಸಾ ಚಿಂತನೆಯ ಕುರಿತು ಹೊಸ ಅರಿವು ಮೂಡಿಸಿತು.

ಕಾರ್ಯಕ್ರಮವನ್ನು ರಮಾಕಾಂತ ಕಮತಗಿ ನಿರೂಪಿಸಿದರು. ಜಯಶ್ರೀ ಅಂಗಡಿ ಸ್ವಾಗತಿಸಿದರು. ಎಸ್.ಟಿ. ವಾಲ್ಮೀಕಿ ವಂದಿಸಿದರು. ಬಸವರಾಜ ಹತ್ತಿ ಗೋಷ್ಠಿ ನಿರ್ವಹಿಸಿದರು.

ಯುವ ಸಾಹಿತ್ಯ ಸಮಾವೇಶವು ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಹಾಗೂ ಸಮಾಜಮುಖಿ ಚಿಂತಕರಿಗೆ ವಿಚಾರ ವಿನಿಮಯದ ವೇದಿಕೆಯಾಗಿದ್ದು, ಯುವಜನಾಂಗದಲ್ಲಿ ಓದು, ಚಿಂತನೆ ಹಾಗೂ ಸಾಮಾಜಿಕ ಬದ್ಧತೆಯ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande