
ಕೋಲ್ಕತ್ತಾ, 20 ಮೇ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರ ಖಾಸಗಿ ಸಹಾಯಕ ಚಂದ್ರನಾಥ ರಥ್ ಹತ್ಯೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ ಸಿಬಿಐ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು, ಐದನೇ ಆರೋಪಿಯನ್ನು ವಾರಾಣಸಿಯಲ್ಲಿ ಬಂಧಿಸಿದೆ.
ಬಂಧಿತನನ್ನು ವಿನಯ್ ರೈ ಅಲಿಯಾಸ್ ಪಪಮ್ ರೈ ಎಂದು ಗುರುತಿಸಲಾಗಿದೆ. ಆತ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಜಮಾನಿಯಾ ಪ್ರದೇಶದ ಮೂಲ ನಿವಾಸಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ವಾರಾಣಸಿಯಲ್ಲಿ ನೆಲೆಸಿ ಪ್ರಾಪರ್ಟಿ ಡೀಲಿಂಗ್ ವ್ಯವಹಾರ ನಡೆಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಖಚಿತ ಮಾಹಿತಿ ಹಾಗೂ ಲಭ್ಯವಾದ ಸಾಕ್ಷ್ಯಾಧಾರಗಳ ಆಧಾರದಲ್ಲಿ ವಾರಾಣಸಿಯ ರಿಸರ್ವ್ ಪೊಲೀಸ್ ಲೈನ್ಸ್ ಪ್ರದೇಶದಿಂದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಬಿಐ, ಎರಡು ದಿನಗಳ ಟ್ರಾನ್ಸಿಟ್ ರಿಮಾಂಡ್ ಪಡೆದು ಮುಂದಿನ ವಿಚಾರಣೆಗೆ ಕೊಲ್ಕತ್ತಾಕ್ಕೆ ಕರೆದೊಯ್ದಿದೆ.
ಬಂಧನ ಪ್ರಕ್ರಿಯೆಯ ಭಾಗವಾಗಿ ಕ್ಯಾಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದು, ವೈದ್ಯಕೀಯ ಪರೀಕ್ಷೆ ಸೇರಿದಂತೆ ಎಲ್ಲಾ ಕಾನೂನು ಕ್ರಮಗಳನ್ನು ಸಿಬಿಐ ಪೂರ್ಣಗೊಳಿಸಿದೆ.
ಈ ಪ್ರಕರಣವನ್ನು ಪಶ್ಚಿಮ ಬಂಗಾಳ ಪೊಲೀಸರಿಂದ ಸಿಬಿಐಗೆ ಹಸ್ತಾಂತರಿಸಲಾಗಿದ್ದು, ಹತ್ಯೆ ಹಾಗೂ ಅಪರಾಧ ಸಂಚು ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಇದಕ್ಕೂ ಮೊದಲು ಬಿಹಾರದ ಬಕ್ಸರ್ ಮೂಲದ ಮಯಂಕ್ ರಾಜ್ ಮಿಶ್ರಾ ಮತ್ತು ವಿಕ್ಕಿ ಮೌರ್ಯ, ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ರಾಜ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ, ಇವರೆಲ್ಲರೂ ಸುಪಾರಿ ಕಿಲ್ಲರ್ಗಳಾಗಿರುವ ಶಂಕೆ ವ್ಯಕ್ತವಾಗಿದೆ.
ಇದೇ ವೇಳೆ ಮಂಗಳವಾರ ಮತ್ತೊಬ್ಬ ಆರೋಪಿ ರಾಜ್ ಕುಮಾರ್ ಸಿಂಗ್ನನ್ನು ಮುಜಫ್ಫರ್ನಗರದಲ್ಲಿ ಸಿಬಿಐ ಬಂಧಿಸಿತ್ತು. ಆದರೆ, ಅವನ ಕುಟುಂಬ ಸದಸ್ಯರು ಯಾವುದೇ ಅಪರಾಧ ಚಟುವಟಿಕೆಗಳ ಬಗ್ಗೆ ಅಥವಾ ಸಹ ಆರೋಪಿಗಳೊಂದಿಗೆ ಸಂಪರ್ಕದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.