
ಬೆಂಗಳೂರು, 20 ಮೇ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರ ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ನಡೆದ ಸಭೆಯಲ್ಲಿ ಹಲವು ಹಿರಿಯ ನಾಯಕರು ಭಾಗವಹಿಸಿ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುವ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ರಾಜೂಗೌಡ ನಾಯಕ್, ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಸೇರಿದಂತೆ ಹಲವು ಮಾಜಿ ಸಚಿವರು ಹಾಗೂ ಶಾಸಕರು ಉಪಸ್ಥಿತರಿದ್ದರು.
ಸಭೆಯಲ್ಲಿ ಮಾತನಾಡಿದ ಬಿಜೆಪಿ ನಾಯಕ ಬಿ.ಶ್ರೀರಾಮುಲು ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣವನ್ನು 7 ಶೇಕಡದಿಂದ 3 ಶೇಕಡಕ್ಕೆ ಇಳಿಸಿರುವುದು ರಾಜ್ಯ ಸರ್ಕಾರದ ದಲಿತ ವಿರೋಧಿ ಹಾಗೂ ಸಮುದಾಯ ವಿರೋಧಿ ಕ್ರಮ ಎಂದು ಆರೋಪಿಸಿದರು.
ಮೀಸಲಾತಿ ಎಂಬುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಸಂವಿಧಾನಬದ್ಧ ಹಕ್ಕಾಗಿದ್ದು, ಅದನ್ನು ಕುಂಠಿತಗೊಳಿಸುವ ಯಾವುದೇ ಕ್ರಮವನ್ನು ಒಪ್ಪುವುದಿಲ್ಲ ಎಂದು ಅವರು ಹೇಳಿದರು. ಸಮುದಾಯದ ಹಕ್ಕುಗಳ ರಕ್ಷಣೆಗೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಜನರ ಮುಂದೆ ಕಾಂಗ್ರೆಸ್ ಸರ್ಕಾರದ “ನಿಜಸ್ವರೂಪ” ಬಯಲಿಗೆಳೆಯುವ ಉದ್ದೇಶದಿಂದ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ನಾಯಕರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ ಅವರು, ಸಮುದಾಯವು ಈ ವಿಚಾರದಲ್ಲಿ ಸರ್ಕಾರಕ್ಕೆ ತಕ್ಕ ಉತ್ತರ ನೀಡಲು ಸಜ್ಜಾಗಿದೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.