ಸಂವೇದನಾಶೀಲರಾಗಿರಿ : ಐಎಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಮುರ್ಮು ಸಲಹೆ
ನಾನಾ
President


ನವದೆಹಲಿ, 20 ಮೇ (ಹಿ.ಸ.) :

ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಗಳಿಗೆ ಸಂವೇದನಾಶೀಲತೆ ಮತ್ತು ತಾರ್ಕಿಕತೆಯ ನಡುವೆ ಸಮತೋಲನ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

“ಅಧಿಕಾರಿಗಳು ಸಂವೇದನಾಶೀಲರಾಗಿರಬೇಕು, ಆದರೆ ಭಾವನಾತ್ಮಕರಾಗಬಾರದು” ಎಂದು ಅವರು ಹೇಳಿದರು.

ರಾಷ್ಟ್ರಪತಿ ಭವನದಲ್ಲಿ ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಸಹಾಯಕ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿರುವ 2024ನೇ ಬ್ಯಾಚ್ನ ಐಎಎಸ್ ಅಧಿಕಾರಿಗಳೊಂದಿಗೆ ನಡೆದ ಸಂವಾದದಲ್ಲಿ ರಾಷ್ಟ್ರಪತಿಗಳು ಮಾತನಾಡಿದರು.

ದೇಶದ ಅಭಿವೃದ್ಧಿಯಲ್ಲಿ ಅಖಿಲ ಭಾರತೀಯ ಸೇವೆಗಳು, ವಿಶೇಷವಾಗಿ ಐಎಎಸ್ ಮಹತ್ವದ ಪಾತ್ರ ವಹಿಸಿವೆ ಎಂದು ಅವರು ಹೇಳಿದರು. ದೇಶವು ಅಭಿವೃದ್ಧಿಯ ಹೊಸ ಹಂತಕ್ಕೆ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲಿನ ನಿರೀಕ್ಷೆಗಳೂ ಹೆಚ್ಚಾಗಿವೆ ಎಂದು ತಿಳಿಸಿದರು.

ಯುವ ಅಧಿಕಾರಿಗಳಿಗೆ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದ್ದು, ಅನೇಕ ಸಂದರ್ಭಗಳಲ್ಲಿ ತಜ್ಞರ ತಂಡಗಳನ್ನು ಮುನ್ನಡೆಸಬೇಕಾಗುತ್ತದೆ ಎಂದು ಅವರು ಹೇಳಿದರು.

ಈ ಕಾರಣದಿಂದಾಗಿ ಅಧಿಕಾರಿಗಳ ಕಲಿಕೆಯ ವೇಗ ಮತ್ತು ವ್ಯಾಪ್ತಿ ಎರಡೂ ವಿಶಾಲವಾಗಿರಬೇಕು. ನಾನಾ ಪರಿಸ್ಥಿತಿಗಳಿಗೆ ಹಾಗೂ ಕ್ಷೇತ್ರಗಳಿಗೆ ತಕ್ಕಂತೆ ತಮ್ಮನ್ನು ತಾವು ಹೊಂದಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧಿಕಾರಿಗಳ ನಿಷ್ಪಕ್ಷಪಾತತೆ ಅವರ ನ್ಯಾಯಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಷ್ಟ್ರಪತಿ ಹೇಳಿದರು. ಜೊತೆಗೆ, ಸಂವೇದನಾಶೀಲತೆ ಸಮಾಜದ ಎಲ್ಲಾ ವರ್ಗಗಳ ಒಳಗೊಳ್ಳುವಿಕೆಗೆ ಇರುವ ಬದ್ಧತೆಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಪಾರದರ್ಶಕತೆ ಮತ್ತು ನಿರಂತರ ಕಾರ್ಯಕ್ಷಮತೆ ಅಧಿಕಾರಿಗಳ ವಿಶ್ವಾಸಾರ್ಹತೆಯನ್ನು ನಿರ್ಮಿಸುತ್ತದೆ ಎಂದ ಅವರು, ವೈಯಕ್ತಿಕ ಹಾಗೂ ವೃತ್ತಿಪರ ಪ್ರಾಮಾಣಿಕತೆಯೇ ಜನಹಿತಕ್ಕಾಗಿ ದೃಢ ನಿರ್ಧಾರ ಕೈಗೊಳ್ಳುವ ನೈತಿಕ ಧೈರ್ಯ ನೀಡುತ್ತದೆ ಎಂದು ಹೇಳಿದರು.

“ನೈತಿಕತೆ ಮತ್ತು ಸುಶಾಸನ ಒಂದೇ ನಾಣ್ಯದ ಎರಡು ಮುಖಗಳು” ಎಂದು ಹೇಳಿದ ರಾಷ್ಟ್ರಪತಿ, ಅಧಿಕಾರಿಗಳು ಪ್ರಾಮಾಣಿಕರಾಗಿರುವುದರ ಜೊತೆಗೆ ಫಲಿತಾಂಶ ನೀಡುವತ್ತಲೂ ಗಮನ ಹರಿಸಬೇಕು ಎಂದು ಸೂಚಿಸಿದರು. ನಿರ್ಧಾರ ಕೈಗೊಳ್ಳುವುದನ್ನು ತಪ್ಪಿಸುವುದೇ ನೈತಿಕತೆ ಅಲ್ಲ; ಜನಹಿತ ಮತ್ತು ನಿಯಮಾನುಸಾರ ಸರಿಯಾದ ನಿರ್ಧಾರ ಕೈಗೊಳ್ಳುವುದೇ ನಿಜವಾದ ನೈತಿಕತೆ ಎಂದು ಅವರು ಹೇಳಿದರು.

ನ್ಯಾಯ ವಿಳಂಬವಾದರೆ ಅದು ನ್ಯಾಯ ನಿರಾಕರಣೆಯಷ್ಟೇ ಗಂಭೀರ ಎಂದು ಹೇಳುವಂತೆ, ಆಡಳಿತಾತ್ಮಕ ನಿರ್ಧಾರಗಳಲ್ಲಿ ಆಗುವ ವಿಳಂಬವೂ ಜನರನ್ನು ಅವರ ನ್ಯಾಯಸಮ್ಮತ ಹಕ್ಕುಗಳಿಂದ ವಂಚಿಸುವಂತೆಯೇ ಎಂದು ರಾಷ್ಟ್ರಪತಿ ಮುರ್ಮು ಅಭಿಪ್ರಾಯಪಟ್ಟರು.

ಪ್ರಜಾಪ್ರಭುತ್ವದ ಉದ್ದೇಶ ಜನರ ಆಶಯಗಳನ್ನು ಈಡೇರಿಸುವುದಾಗಿದೆ. ಜನಪ್ರತಿನಿಧಿಗಳ ಮೂಲಕ ವ್ಯಕ್ತವಾಗುವ ಜನರ ಸಮಸ್ಯೆಗಳು ಮತ್ತು ಬೇಡಿಕೆಗಳಿಗೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

“ವಿಕಸಿತ ಭಾರತ” ಗುರಿ ಸಾಧಿಸಲು ಹಾಗೂ ಸಮಾಜವನ್ನು ಪ್ರಗತಿಯ ಶಿಖರಕ್ಕೆ ಕೊಂಡೊಯ್ಯಲು ಅಧಿಕಾರಿಗಳು ಅನೇಕ ಬಾರಿ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ರಾಷ್ಟ್ರಪತಿ ಹೇಳಿದರು. ಸಮಾಜದ ಹಿಂದುಳಿದ ವರ್ಗಗಳನ್ನೂ ಒಳಗೊಂಡಂತೆ ದೇಶದ ಜನರನ್ನು ತಮ್ಮ ಚಿಂತನೆ ಮತ್ತು ಕಾರ್ಯಗಳ ಕೇಂದ್ರಬಿಂದುವಾಗಿರಿಸಬೇಕು ಎಂದು ಅವರು ಐಎಎಸ್ ಅಧಿಕಾರಿಗಳಿಗೆ ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande