ಆನ್ಲೈನ್ ಔಷಧಿ ಮಾರಾಟ ವಿರೋಧಿಸಿ ಔಷಧಿ ಅಂಗಡಿಗಳು ಬಂದ್
ದೇಶದಾದ್ಯಂತ
ಫೋಟೋ


ಗದಗ, 20 ಮೇ (ಹಿ.ಸ.) :

ಆ್ಯಂಕರ್ : ಆನ್ಲೈನ್ ಮೂಲಕ ಔಷಧಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿ ಗದಗ ಜಿಲ್ಲೆಯಾದ್ಯಂತ ಔಷಧಿ ಅಂಗಡಿ ಬಂದ್ ಮಾಡಿ ಔಷಧಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.

ಗದಗ ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಕರೆಯ ಮೇರೆಗೆ ಜಿಲ್ಲೆಯ ಸುಮಾರು 500ಕ್ಕೂ ಹೆಚ್ಚು ಔಷಧಿ ಅಂಗಡಿಗಳು ಸ್ವಯಂಪ್ರೇರಿತವಾಗಿ ಬಂದ್ ಆಗಿದ್ದು, ಗದಗ–ಬೆಟಗೇರಿ ಅವಳಿ ನಗರದಲ್ಲಿಯೂ ಔಷಧಿ ಅಂಗಡಿಗಳು ಕಾರ್ಯನಿರ್ವಹಿಸಲಿಲ್ಲ.

ಆನ್ಲೈನ್ ಔಷಧಿ ಮಾರಾಟದಿಂದ ಸ್ಥಳೀಯ ಔಷಧಿ ಅಂಗಡಿಗಳ ವ್ಯಾಪಾರಕ್ಕೆ ಭಾರಿ ಹೊಡೆತ ಬೀಳುತ್ತಿದೆ. ಜೊತೆಗೆ ವೈದ್ಯರ ಸಲಹೆ ಇಲ್ಲದೇ ಔಷಧಿ ಖರೀದಿ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ಸಾರ್ವಜನಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸಿದರು.

ಬಂದ್ ವೇಳೆ ಮೆಡಿಕಲ್ ಅಂಗಡಿಗಳ ಮಾಲೀಕರು ಪ್ರತಿಭಟನೆ ನಡೆಸಿ, ಕೂಡಲೇ ಸರ್ಕಾರ ಆನ್ಲೈನ್ ಔಷಧಿ ಮಾರಾಟವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

“ಔಷಧಿ ಎನ್ನುವುದು ಸಾಮಾನ್ಯ ವಸ್ತುವಲ್ಲ. ಇದು ಜನರ ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯ. ಆದ್ದರಿಂದ ನಿಯಂತ್ರಣವಿಲ್ಲದ ಆನ್ಲೈನ್ ಮಾರಾಟಕ್ಕೆ ಅವಕಾಶ ನೀಡಬಾರದು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಆದರೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಂಘವು ವಿಶೇಷ ಕ್ರಮ ಕೈಗೊಂಡಿತ್ತು. ತುರ್ತು ಸಂದರ್ಭಗಳಲ್ಲಿ ಔಷಧಿ ಪೂರೈಕೆ ಮಾಡಲು ಪ್ರತ್ಯೇಕ ತಂಡ ರಚನೆ ಮಾಡಲಾಗಿದ್ದು, ಅಗತ್ಯವಿದ್ದವರಿಗೆ ಔಷಧಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

“ನಮ್ಮ ಹೋರಾಟ ಸಾರ್ವಜನಿಕರ ವಿರುದ್ಧ ಅಲ್ಲ. ಔಷಧಿ ವಿತರಣಾ ವ್ಯವಸ್ಥೆಯಲ್ಲಿ ಸುರಕ್ಷತೆ ಮತ್ತು ನಿಯಮ ಪಾಲನೆಗಾಗಿ ಈ ಬಂದ್ ನಡೆಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗಿದೆ” ಎಂದು ಔಷಧಿ ಅಂಗಡಿಗಳ ಮಾಲೀಕರು ಸ್ಪಷ್ಟಪಡಿಸಿದರು.

ಗದಗ ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಮನಗೌಡ ಮಾತನಾಡಿ, ದೇಶದಾದ್ಯಂತ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಗದಗ ಜಿಲ್ಲೆಯಲ್ಲೂ ಬಂದ್ ನಡೆಸಲಾಗಿದೆ. ಸರ್ಕಾರ ತಕ್ಷಣವೇ ಈ ಕುರಿತು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಾದ್ಯಂತ ನಡೆದ ಈ ಬಂದ್ ನಿಂದ ಔಷಧಿ ವ್ಯಾಪಾರ ವಲಯದಲ್ಲಿ ಚರ್ಚೆ ಜೋರಾಗಿದ್ದು, ಆನ್ಲೈನ್ ಔಷಧಿ ಮಾರಾಟದ ವಿರುದ್ಧ ವ್ಯಾಪಾರಸ್ಥರ ಆಕ್ರೋಶ ಮತ್ತೊಮ್ಮೆ ಹೊರಹೊಮ್ಮಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande