
ದೊಹಾ, 20 ಮೇ (ಹಿ.ಸ.) :
ಆ್ಯಂಕರ್ : ಕರ್ನಾಟಕ ಸಂಘ ಕತಾರ್ಗೆ 2026–2028ನೇ ಸಾಲಿನ ನೂತನ ಆಡಳಿತ ಸಮಿತಿಯನ್ನು ಮೇ 15ರಂದು ಭಾರತೀಯ ಸಾಂಸ್ಕೃತಿಕ ಕೇಂದ್ರ ಸಭಾಂಗಣದಲ್ಲಿ ನಡೆದ ವಾರ್ಷಿಕ ಸರ್ವಸದಸ್ಯರ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಸಂಘದ 15ನೇ ಅಧ್ಯಕ್ಷರಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಅವರ ನಾಯಕತ್ವದ ಮೇಲೆ ವಿಶ್ವಾಸ ವ್ಯಕ್ತಪಡಿಸಿದರು.
ಕುಂದಾಪುರ ತಾಲ್ಲೂಕಿನ ಬೈಂದೂರು ಮೂಲದ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರು ಹಲವು ವರ್ಷಗಳಿಂದ ಕತಾರ್ನ ಭಾರತೀಯ ಸಮುದಾಯದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನವೀಯ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಈ ಹಿಂದೆ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ, ಭಾರತೀಯ ಕ್ರೀಡಾ ಕೇಂದ್ರದ ಸಲಹಾ ಮಂಡಳಿ ಸದಸ್ಯರಾಗಿ ಹಾಗೂ ಭಾರತೀಯ ಸಮುದಾಯ ಹಿತಚಿಂತಕ ವೇದಿಕೆ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ತಮ್ಮ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಕರ್ನಾಟಕದ ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಕತಾರ್ನ ಕನ್ನಡಿಗರ ಏಕತೆ ಹಾಗೂ ಸಾಮಾಜಿಕ–ಸಾಂಸ್ಕೃತಿಕ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ದಿಸೆಯಲ್ಲಿ ನೂತನ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ನೂತನ ಆಡಳಿತ ಸಮಿತಿಯಲ್ಲಿ ಅನಿಲ ಭಾಸಗಿ ಉಪಾಧ್ಯಕ್ಷರಾಗಿ, ಸುಜಿತ್ ಕುಮಾರ್ ಹೊಸದುರ್ಗ ಪ್ರಧಾನ ಕಾರ್ಯದರ್ಶಿಯಾಗಿ, ಮಂಜೋತ್ ಸುರೇಶ್ ಖಜಾಂಚಿಯಾಗಿ, ಭಾವನಾ ನವೀನ್ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಶಶಿಧರ ಹೆಚ್.ಬಿ. ಜಂಟಿ ಸಾಂಸ್ಕೃತಿಕ ಹಾಗೂ ಕನ್ನಡ ಚಟುವಟಿಕೆಗಳ ಕಾರ್ಯದರ್ಶಿಯಾಗಿ, ಎಲ್.ಜಿ. ಪಾಟೀಲ ಕ್ರೀಡಾ ಕಾರ್ಯದರ್ಶಿಯಾಗಿ, ಪ್ರಶಾಂತ ಹಿರೇಮಠ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿ, ಪ್ರಭುರಾಜು ಜಗಲೂರು ಇವೆಂಟ್ ಮತ್ತು ಲಾಜಿಸ್ಟಿಕ್ಸ್ ಕಾರ್ಯದರ್ಶಿಯಾಗಿ, ಶುಭಾ ಆರ್. ರಾವ್ ಮಹಿಳಾ ಮತ್ತು ಮಕ್ಕಳ ಚಟುವಟಿಕೆಗಳ ಕಾರ್ಯದರ್ಶಿಯಾಗಿ, ದಾಕ್ಷಾಯಿಣಿ ಜಿ. ಜಂಟಿ ಕ್ರೀಡಾ ಕಾರ್ಯದರ್ಶಿಯಾಗಿ ಹಾಗೂ ಗುರು ಪ್ರಸಾದ್ ಬಿ.ಕೆ. ಪರಿಸರ ಮತ್ತು ಸದಸ್ಯತ್ವ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಸಂಘದ ನಿಕಟ ಪೂರ್ವಾಧ್ಯಕ್ಷ ಎಂ. ರವಿ ಶೆಟ್ಟಿ ಅವರು ಸಲಹಾ ಸಮಿತಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ನೂತನ ಸಮಿತಿಯು ಕಾರ್ಮಿಕರ ದಿನಾಚರಣೆ, ತಾಯಂದಿರ ದಿನಾಚರಣೆ, ಶಿಕ್ಷಕರ ಮತ್ತು ಅಭಿಯಂತರರ ದಿನಾಚರಣೆ, ರಕ್ತದಾನ ಶಿಬಿರ, ಪರಿಸರ ದಿನಾಚರಣೆ, ಸಂಭ್ರಮ–2026, ಕನ್ನಡ ರಾಜ್ಯೋತ್ಸವ, ಕ್ರೀಡಾಕೂಟಗಳು, ಸಾಂಪ್ರದಾಯಿಕ ಹಬ್ಬಗಳ ಆಚರಣೆ, ಸಾಂಸ್ಕೃತಿಕ ಸಮ್ಮೇಳನ, ಮಹಿಳೆಯರು ಹಾಗೂ ಮಕ್ಕಳಿಗಾಗಿ ವೈದ್ಯಕೀಯ ಶಿಬಿರಗಳು, ಕವಿಗೋಷ್ಠಿ ಮತ್ತು ವಿವಿಧ ಸಮಾಜಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆ ರೂಪಿಸಿದೆ.
ನಿರ್ಗಮಿತ ಅಧ್ಯಕ್ಷ ಎಂ. ರವಿ ಶೆಟ್ಟಿ ಅವರು ಕಳೆದ ಅವಧಿಯಲ್ಲಿ ಸಹಕರಿಸಿದ ಸದಸ್ಯರು ಮತ್ತು ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿ, ನೂತನ ಸಮಿತಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ಸಲಹಾ ಸಮಿತಿ ಸದಸ್ಯರಾದ ಅರುಣ್ ಕುಮಾರ್, ವಿ.ಎಸ್. ಮನ್ನಂಗಿ, ದೀಪಕ್ ಶೆಟ್ಟಿ, ಡಾ. ಸಂಜಯ ಕುದರಿ, ಮಹೇಶ್ ಗೌಡ ಹಾಗೂ ಐಸಿಸಿ ಮಾಜಿ ಅಧ್ಯಕ್ಷೆ ಮಿಲನ್ ಅರುಣ್ ಅವರು ನೂತನ ಸಮಿತಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.