
ಬೆಂಗಳೂರು, 20 ಮೇ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಹಾಗೂ ಮೂಲಸೌಕರ್ಯ ವಿಸ್ತರಣೆಗೆ ಸಂಬಂಧಿಸಿದ ಮಹತ್ವದ ನಿರ್ಧಾರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಭೆಯಲ್ಲಿ ಕೈಗೊಂಡರು.
ಸಭೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಯೋಜನೆ, ಶಿಕ್ಷಕರ ನೇಮಕಾತಿ, ಶಾಲಾ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪರೀಕ್ಷಾ ಫಲಿತಾಂಶಗಳ ಸುಧಾರಣೆ ಕುರಿತು ವಿವರವಾದ ಪರಿಶೀಲನೆ ನಡೆಯಿತು.
ಕೆಪಿಎಸ್ ಯೋಜನೆಗೆ ಜೂನ್ 1ರಂದು ಚಾಲನೆ
ಸಭೆಯ ನಿರ್ಧಾರಗಳ ಪ್ರಕಾರ ಜೂನ್ 1ರಂದು ಶಿವಮೊಗ್ಗದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಚಾಲನೆ ನೀಡಲಾಗುವುದು. ಪ್ರತಿ ಕೆಪಿಎಸ್ ಶಾಲೆಯಲ್ಲಿ 1,200 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದ್ದು, ಎಲ್ಕೆಜಿ ಯಿಂದ ಪಿಯುಸಿ ವರೆಗೆ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತದೆ.
ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲಾ 800 ಕೆಪಿಎಸ್ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು. ಈ ವರ್ಷವೇ 800 ಶಾಲೆಗಳ ಆರಂಭಕ್ಕೆ ಟೆಂಡರ್ ಪ್ರಕ್ರಿಯೆ ತ್ವರಿತಗೊಳಿಸಲು ನಿರ್ದೇಶನ ನೀಡಲಾಗಿದೆ.
ಕೆಪಿಎಸ್ ಶಾಲಾ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸುವ ಕುರಿತು ಶಾಲಾ ಬಸ್ ವ್ಯವಸ್ಥೆಯ ಸಾಧ್ಯತೆಯನ್ನು ಪರಿಶೀಲಿಸಲು ಸಹ ಸೂಚಿಸಲಾಗಿದೆ.
15 ಸಾವಿರ ಶಿಕ್ಷಕರ ನೇಮಕಾತಿಗೆ ಸೂಚನೆ
ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ತಕ್ಷಣ ಆರ್ಥಿಕ ಇಲಾಖೆಗೆ ಸಲ್ಲಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಫಲಿತಾಂಶಗಳಲ್ಲಿ ಗಣನೀಯ ಏರಿಕೆ
ಸಭೆಯಲ್ಲಿ ಶಿಕ್ಷಣ ಇಲಾಖೆ ನೀಡಿದ ಅಂಕಿಅಂಶಗಳ ಪ್ರಕಾರ ಈ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಫಲಿತಾಂಶಗಳಲ್ಲಿ ಮಹತ್ವದ ಸುಧಾರಣೆ ಕಂಡುಬಂದಿದೆ.
ಎಸ್ಎಸ್ಎಲ್ಸಿ ಫಲಿತಾಂಶ: ಶೇ. 94.10 (ಹಿಂದಿನ ವರ್ಷಕ್ಕಿಂತ ಶೇ. 14.06 ಹೆಚ್ಚಳ)
ದ್ವಿತೀಯ ಪಿಯುಸಿ ಫಲಿತಾಂಶ: ಶೇ. 86.48 (ಹಿಂದಿನ ವರ್ಷಕ್ಕಿಂತ ಶೇ. 13.03 ಹೆಚ್ಚಳ)
ಎಸ್ಎಸ್ಎಲ್ಸಿಯಲ್ಲಿ 2393 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿದ್ದು, ಕಳೆದ ವರ್ಷ ಈ ಸಂಖ್ಯೆ 766 ಆಗಿತ್ತು.
ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಫಲಿತಾಂಶದಲ್ಲೂ ಮಹತ್ವದ ಏರಿಕೆ ಕಂಡುಬಂದಿದೆ. ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಲ್ಲಿ ಶೇ.18ರಷ್ಟು ಸುಧಾರಣೆ ದಾಖಲಾಗಿದೆ. ವಿವಿಧ ವರ್ಗಗಳಲ್ಲಿ ಕೆಟಗರಿ-1ರಲ್ಲಿ ಶೇ.16.6, 2ಎನಲ್ಲಿ ಶೇ.11.5, 2ಬಿ ಹಾಗೂ 3ಎ, 3ಬಿ ವರ್ಗಗಳಲ್ಲಿ ಕ್ರಮವಾಗಿ ಶೇ.18, ಶೇ.8.12 ಮತ್ತು ಶೇ.10ರಷ್ಟು ಸುಧಾರಣೆ ಕಂಡುಬಂದಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಶೇ.94.80 ಹಾಗೂ ಪಿಯುಸಿ ಶೇ.87.62 ದಾಖಲಾಗಿದ್ದು, ನಗರ ಪ್ರದೇಶಕ್ಕಿಂತ ಉತ್ತಮ ಪ್ರದರ್ಶನ ಕಂಡಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಶೇ.2ರಷ್ಟು ಹೆಚ್ಚುವರಿ ಫಲಿತಾಂಶ ದಾಖಲಾಗಿದೆ. ಈ ಬಾರಿ ಗ್ರೇಸ್ ಅಂಕ ನೀಡಲಾಗಿಲ್ಲ ಹಾಗೂ ಮೂರನೇ ಪರೀಕ್ಷೆ ವ್ಯವಸ್ಥೆಯನ್ನು ಕೈಬಿಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಶಿಕ್ಷಣ ಸುಧಾರಣೆಗೆ ಕೈಗೊಂಡ ಕ್ರಮಗಳು
ಫಲಿತಾಂಶ ಸುಧಾರಣೆಗೆ ರಾಜ್ಯದಾದ್ಯಂತ ಪೋಷಕರು–ಶಿಕ್ಷಕರ ಸಭೆಗಳು, ಅತಿಥಿ ಶಿಕ್ಷಕರ ನೇಮಕ, ಪಠ್ಯಾಧಾರಿತ ಅಧ್ಯಯನ ಕ್ರಮ, ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಗಳು ಹಾಗೂ ಶಿಕ್ಷಕರಿಗೆ ನಿಯಮಿತ ತರಬೇತಿ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷ ತರಬೇತಿ ಕಾರ್ಯಕ್ರಮಗಳ ಮೂಲಕ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳ ಜೊತೆಗೆ ಉಚಿತ ನೋಟ್ಬುಕ್ ವಿತರಣೆಯ ಪ್ರಸ್ತಾವನೆಯನ್ನು ಸಹ ಸರ್ಕಾರ ಪರಿಶೀಲಿಸುತ್ತಿದೆ ಎಂದು ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.