ಗುರುಗಳನ್ನು ಮರೆಯದ ಶಿಷ್ಯರ ಗುರುನಮನ
ಗದಗ, 20 ಮೇ (ಹಿ.ಸ.) : ಆ್ಯಂಕರ್ : ಎರಡುವರೆ ದಶಕಗಳ ಹಿಂದೆ ಕಲಿತ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಮರೆಯದೇ ಗೌರವದಿಂದ ಸನ್ಮಾನಿಸುತ್ತಿರುವುದು ಇಂದಿನ ಸಮಾಜಕ್ಕೆ ಮಾದರಿಯಾಗಿದೆ. ಗುರುವನ್ನು ಮೀರಿಸಿ ಬೆಳೆದ ಶಿಷ್ಯರ ಕೃತಜ್ಞತೆ ನಿಜಕ್ಕೂ ಅಭಿನಂದನೀಯ ಸಂಗತಿ” ಎಂದು ವಿಶ್ರಾಂತ ಮುಖ್ಯೋಪಾಧ್ಯಾಯ ಶಿವನ
ಫೋಟೋ


ಗದಗ, 20 ಮೇ (ಹಿ.ಸ.) :

ಆ್ಯಂಕರ್ : ಎರಡುವರೆ ದಶಕಗಳ ಹಿಂದೆ ಕಲಿತ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಮರೆಯದೇ ಗೌರವದಿಂದ ಸನ್ಮಾನಿಸುತ್ತಿರುವುದು ಇಂದಿನ ಸಮಾಜಕ್ಕೆ ಮಾದರಿಯಾಗಿದೆ. ಗುರುವನ್ನು ಮೀರಿಸಿ ಬೆಳೆದ ಶಿಷ್ಯರ ಕೃತಜ್ಞತೆ ನಿಜಕ್ಕೂ ಅಭಿನಂದನೀಯ ಸಂಗತಿ” ಎಂದು ವಿಶ್ರಾಂತ ಮುಖ್ಯೋಪಾಧ್ಯಾಯ ಶಿವನಗೌಡ್ರ ಹೇಳಿದರು.

ಗದಗ ನಗರದ ಸಿದ್ದಲಿಂಗನಗರದಲ್ಲಿರುವ ಬಸವೇಶ್ವರ ಪ್ರೌಢಶಾಲೆಯ 2001–2002ನೇ ಸಾಲಿನ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಆಯೋಜಿಸಿದ್ದ ‘ಗುರುನಮನ ಹಾಗೂ ಸ್ನೇಹ ಸಮ್ಮಿಲನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಗುರು–ಶಿಷ್ಯ ಸಂಬಂಧಗಳ ಮೌಲ್ಯ ಕ್ಷೀಣಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ತಂತ್ರಜ್ಞಾನ ಯುಗದಲ್ಲಿ ಮಾನವೀಯ ಸಂಬಂಧಗಳು ದುರ್ಬಲವಾಗುತ್ತಿರುವುದನ್ನು ವಿಷಾದಿಸಿದರು. “ಮೊಬೈಲ್ ಹಾವಳಿ, ಕೌಟುಂಬಿಕ ಕಲಹಗಳು ಹಾಗೂ ಸಾಮಾಜಿಕ ಅಸಮಾನತೆಗಳ ಪರಿಣಾಮವಾಗಿ ಸಂಬಂಧಗಳು ಹದಗೆಡುತ್ತಿವೆ. ಇಂತಹ ಸಂದರ್ಭಗಳಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ನೆನೆದು ಗೌರವಿಸುವ ಕಾರ್ಯಕ್ರಮಗಳು ಸಮಾಜದಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತವೆ. ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಮನೋಭಾವ ಬೆಳೆದರೆ ಸಮಾಜದಲ್ಲಿ ಉತ್ತಮ ಮೌಲ್ಯಗಳ ಸ್ಥಾಪನೆ ಸಾಧ್ಯ” ಎಂದು ಹೇಳಿದರು.

ಗುರು–ಶಿಷ್ಯರ ನಡುವಿನ ಬಾಂಧವ್ಯ ಕೇವಲ ಶಾಲಾ ದಿನಗಳಿಗೆ ಸೀಮಿತವಾಗದೆ ಜೀವನಪೂರ್ತಿ ಉಳಿಯಬೇಕೆಂಬ ಆಶಯ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ, ಮಾನವೀಯತೆ ಹಾಗೂ ಹಿರಿಯರ ಮೇಲಿನ ಗೌರವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಐ.ಎಸ್. ಬೆಳವಗಿ ಮಾತನಾಡಿ, ಬಸವೇಶ್ವರ ಪ್ರೌಢಶಾಲೆಯ ಆರಂಭಿಕ ದಿನಗಳು, ಶಾಲೆಯ ಬೆಳವಣಿಗೆಗಾಗಿ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಪಟ್ಟ ಪರಿಶ್ರಮವನ್ನು ಸ್ಮರಿಸಿದರು. ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಗುರುಭಕ್ತಿ ಮತ್ತು ಅಧ್ಯಯನದ ಬದ್ಧತೆ ಹೆಚ್ಚು ಇತ್ತು ಎಂದು ನೆನಪಿಸಿಕೊಂಡ ಅವರು, ಇಂದಿನ ವಿದ್ಯಾರ್ಥಿಗಳು ಸಹ ಶಿಕ್ಷಣದೊಂದಿಗೆ ಮೌಲ್ಯಾಧಾರಿತ ಬದುಕನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವಾಯ್.ಎಚ್. ತಳವಾರ, “ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಉತ್ತಮ ಗುಣಗಳು ಅಡಗಿವೆ. ಅವುಗಳನ್ನು ಗುರುತಿಸಿ ಬೆಳೆಸುವ ಹೊಣೆಗಾರಿಕೆ ಶಿಕ್ಷಕರದ್ದು. ಶಿಕ್ಷಕರು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಶಿಲ್ಪಿಗಳಾಗಿದ್ದಾರೆ” ಎಂದು ಹೇಳಿದರು.

ಪ್ರಸ್ತುತ ಮುಖ್ಯೋಪಾಧ್ಯಾಯ ಕೆ.ವಿ. ಕೊರಡ್ಡಿ ಮಾತನಾಡಿ, ಹಿಂದಿನ ಮತ್ತು ಇಂದಿನ ವಿದ್ಯಾರ್ಥಿಗಳ ಗುಣ–ಸ್ವಭಾವಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದರು. ಹಿಂದಿನ ವಿದ್ಯಾರ್ಥಿಗಳಲ್ಲಿ ಇದ್ದ ಸಹನೆ, ಶಿಸ್ತು, ಗುರುಗಳ ಮೇಲಿನ ಗೌರವ ಮತ್ತು ಪರಿಶ್ರಮದ ಮನೋಭಾವ ಇಂದಿನ ಪೀಳಿಗೆಗೂ ಮಾದರಿಯಾಗಬೇಕು ಎಂದು ಹೇಳಿದರು. ಸುಮಾರು ಎರಡು ದಶಕಗಳ ಬಳಿಕ ಸಹಪಾಠಿಗಳು ಒಂದಾಗಿ ಸೇರಿ ಗುರುಗಳನ್ನು ಸನ್ಮಾನಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಬಿ. ಗೌಡರ, ಶಿಕ್ಷಕಿ ಶ್ರೀಮತಿ ಬಿ.ಬಿ. ಸಂಕನೂರ, ಶಿಕ್ಷಕರಾದ ಆರ್.ಎಂ. ಬಡಿಗೇರ, ಬಿ.ಕೆ. ನಿಂಬಣ್ಣಗೌಡರ, ಎಸ್.ಜಿ. ಕಟ್ಟಿಮನಿ, ಕೆ.ವಿ. ಹಿರೇವಡೆಯರ, ಡಿ.ಎಸ್. ಕಣವಿ ಹಾಗೂ ಬಿ.ಎಸ್. ಬೇವಿನಮರದ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ರೂಪಿಸಿದ ಗುರುಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಶ್ರೀಮತಿ ಬಿ.ಬಿ. ಸಂಕನೂರ, ಬಿ.ಕೆ. ನಿಂಬಣ್ಣಗೌಡರ, ಎಸ್.ಜಿ. ಕಟ್ಟಿಮನಿ, ಆರ್.ಎಂ. ಬಡಿಗೇರ, ಎಚ್.ಎಸ್. ಕರಕರಣ್ಣವರ ಹಾಗೂ ಬಿ.ಎಸ್. ಬೇವಿನಮರದ ಸೇರಿದಂತೆ ಹಲವು ಶಿಕ್ಷಕರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಬಹುಕಾಲದ ನಂತರ ಒಂದೇ ವೇದಿಕೆಯಲ್ಲಿ ಸೇರಿದ್ದ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ನೆನಪುಗಳನ್ನು ಹಂಚಿಕೊಂಡರು. ಶಿಕ್ಷಕರ ಮಾರ್ಗದರ್ಶನದಿಂದ ತಮ್ಮ ಬದುಕಿನಲ್ಲಿ ಸಾಧನೆ ಸಾಧ್ಯವಾಯಿತು ಎಂದು ಹೇಳಿದ ಅನೇಕ ವಿದ್ಯಾರ್ಥಿಗಳು, ಜೀವನದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸ್ನೇಹ, ಸೌಹಾರ್ದತೆ, ನೆನಪುಗಳು ಹಾಗೂ ಗುರುಭಕ್ತಿಯ ಅನೇಕ ಮಧುರ ಕ್ಷಣಗಳು ಮೂಡಿಬಂದವು. ಗುರುಗಳನ್ನು ಮರೆಯದೇ ಗೌರವಿಸುವ ಶಿಷ್ಯರ ಪರಂಪರೆ ಸಮಾಜದಲ್ಲಿ ಮೌಲ್ಯಯುತ ಸಂಬಂಧಗಳ ಉಳಿವಿಗೆ ಮಾದರಿಯಾಗಬೇಕೆಂಬ ಸಂದೇಶ ಕಾರ್ಯಕ್ರಮದ ಮೂಲಕ ವ್ಯಕ್ತವಾಯಿತು.

ನಿಂಗರಾಜ ವಾಲ್ಮೀಕಿ ಹಾಗೂ ಕವಿತಾ ಶೀಲವಂತರ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಹೆಚ್ ಸ್ವಾಗತಿಸಿದರು. ಮೃತ್ಯುಂಜಯ ಹೆಚ್ ವಂದಿಸಿದರು. ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande