
ಬೆಂಗಳೂರು, 20 ಮೇ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರದ ಸಾಧನಾ ಸಮಾವೇಶದ ಬಳಿಕ ರಾಜಕೀಯ ವಾತಾವರಣ ಮತ್ತಷ್ಟು ಕದನಕ್ಕೀಡಾಗಿದ್ದು, ಬಿಜೆಪಿ ನಾಯಕ ಅಶೋಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಕ್ಸ್ನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರವು ಕರ್ನಾಟಕವನ್ನು “ನಂ.1” ರಾಜ್ಯವಾಗಿ ಸಾಧನೆ ಮಾಡಿದೆ ಎಂದು ಹೇಳಿಕೊಳ್ಳುತ್ತಿರುವುದನ್ನು ತೀವ್ರವಾಗಿ ಟೀಕಿಸಿರುವ ಅವರು, ಅಭಿವೃದ್ಧಿಯ ಬದಲು ರಾಜ್ಯದಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಹಾಗೂ ದುರಾಡಳಿತವೇ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.
ಅಶೋಕ ಅವರು ತಮ್ಮ ಹೇಳಿಕೆಯಲ್ಲಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳವಾಗಿರುವುದನ್ನು ಉಲ್ಲೇಖಿಸಿ, ಸರ್ಕಾರ ರೈತರ ಬದುಕು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ. ಕೃಷಿ ಸಂಕಷ್ಟದ ನಡುವೆ ಸರ್ಕಾರದ ನೀತಿಗಳು ರೈತರ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿವೆ ಎಂದು ಅವರು ಆರೋಪಿಸಿದ್ದಾರೆ.
ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮ, ಕೆಐಎಡಿಬಿ, ಕೆಪಿಎಸ್ಸಿ ಸೇರಿದಂತೆ ಹಲವು ಹಗರಣಗಳ ಉಲ್ಲೇಖ ಮಾಡಿರುವ ಅವರು, ಆಡಳಿತ ವ್ಯವಸ್ಥೆ ಹಗರಣಗಳ ಕೇಂದ್ರವಾಗಿದೆ ಎಂದು ಆರೋಪಿಸಿದ್ದಾರೆ. ಸರ್ಕಾರದ ಕೆಲವು ನಿರ್ಧಾರಗಳು ಸಾರ್ವಜನಿಕ ಹಣದ ದುರ್ಬಳಕೆಗೆ ಕಾರಣವಾಗಿವೆ ಎಂದು ಅವರು ಹೇಳಿದ್ದಾರೆ.
ಹಾಲು, ವಿದ್ಯುತ್, ನೀರು, ಬಸ್ ಟಿಕೆಟ್, ಆಸ್ತಿ ತೆರಿಗೆ, ಸ್ಟಾಂಪ್ ಡ್ಯೂಟಿ ಹಾಗೂ ಕಸದ ಶುಲ್ಕ ಸೇರಿದಂತೆ ಅನೇಕ ಅಗತ್ಯ ಸೇವೆಗಳ ದರ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ ಎಂದು ಅವರು ಟೀಕಿಸಿದ್ದಾರೆ. “ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
ಕೆಪಿಎಸ್ಸಿ ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ದೋಷಗಳು ಹಾಗೂ ಪರೀಕ್ಷಾ ಕೇಂದ್ರಗಳ ನಿರ್ವಹಣಾ ಸಮಸ್ಯೆಗಳನ್ನು ಉಲ್ಲೇಖಿಸಿರುವ ಅವರು, ಯುವಕರ ಭವಿಷ್ಯ ಸರ್ಕಾರದ ನಿರ್ಲಕ್ಷ್ಯದಿಂದ ಹಾಳಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಔಷಧಿ ಹಾಗೂ ಮೂಲಸೌಕರ್ಯಗಳ ಕೊರತೆ ಇದೆ ಎಂದು ಆರೋಪಿಸಿರುವ ಅವರು, ದುರ್ಬಲ ಆಡಳಿತದಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದ್ದಾರೆ.
, ಸರ್ಕಾರದ ಸಾಧನಾ ಸಮಾವೇಶವನ್ನು “ವೈಫಲ್ಯೋತ್ಸವ” ಎಂದು ಕರೆಯುವ ಮೂಲಕ, ರಾಜ್ಯ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.