
ಗದಗ, 20 ಮೇ (ಹಿ.ಸ.) :
ಆ್ಯಂಕರ್ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯವೂ ಅತ್ಯಂತ ಅಗತ್ಯವಾಗಿದ್ದು, ಯುವಜನತೆಗೆ ಉದ್ಯೋಗದ ದಾರಿಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ನರಗುಂದ ತಾಲೂಕಿನ ಅಳಗವಾಡಿ ರಸ್ತೆಯಲ್ಲಿರುವ ಜಿಟಿಟಿಸಿ ಕೇಂದ್ರವು ವಿವಿಧ ವೃತ್ತಿಪರ ತರಬೇತಿ ಕೋರ್ಸ್ ಗಳಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿದೆ.
ಟೂಲರೂಮ್ ಮಶಿನಿಸ್ಟ್, ವೆಹಿಕಲ್ ಅಸೆಂಬ್ಲಿ ಫಿಟ್ಟರ್ ಹಾಗೂ ಅಟೊಮೊಬೈಲ್ ವೆಲ್ಡರ್ ಸೇರಿದಂತೆ ಹಲವು ಉದ್ಯೋಗಾಭಿಮುಖ ತರಬೇತಿಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿಶೇಷವೆಂದರೆ, ಹತ್ತನೇ ತರಗತಿ ಹಾಗೂ ಪಿಯುಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಗ್ರಾಮೀಣ ಭಾಗದ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ.
ಒಂದು ವರ್ಷದ ಅವಧಿಯ ಟೂಲ ರೂಮ್ ಮಶಿನಿಸ್ಟ್ ತರಬೇತಿಯಲ್ಲಿ ಕೈಗಾರಿಕೆಗಳಲ್ಲಿ ಬಳಸಲಾಗುವ ಅತ್ಯಾಧುನಿಕ ಯಂತ್ರೋಪಕರಣಗಳ ಕಾರ್ಯವಿಧಾನಗಳ ಬಗ್ಗೆ ಸಮಗ್ರ ತರಬೇತಿ ನೀಡಲಾಗುತ್ತದೆ. ಟರ್ನರ್, ಮಿಲ್ಲರ್, ಗ್ರೈಂಡರ್ ಹಾಗೂ ಸಿ.ಎನ್.ಸಿ ಯಂತ್ರಗಳ ಪ್ರಾಯೋಗಿಕ ತರಬೇತಿಯನ್ನು ಒಳಗೊಂಡಿರುವ ಈ ಕೋರ್ಸ್, ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಅಗತ್ಯವಿರುವ ತಾಂತ್ರಿಕ ಜ್ಞಾನವನ್ನು ಒದಗಿಸುತ್ತದೆ.
ಇದಲ್ಲದೆ, ವೆಹಿಕಲ್ ಅಸೆಂಬ್ಲಿ ಫಿಟ್ಟರ್ ಮತ್ತು ಅಟೊಮೊಬೈಲ್ ವೆಲ್ಡರ್ ತರಬೇತಿಗಳಲ್ಲಿ ಫಿಟ್ಟರ್ ಕಾರ್ಯವಿಧಾನ, ವಾಹನಗಳ ಬಿಡಿಭಾಗಗಳ ಜೋಡಣೆ, ವೆಲ್ಡಿಂಗ್ ತಂತ್ರಜ್ಞಾನ ಸೇರಿದಂತೆ ವಿವಿಧ ಪ್ರಾಯೋಗಿಕ ತರಬೇತಿಗಳನ್ನು ನೀಡಲಾಗುತ್ತದೆ. ತರಬೇತಿಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕೇವಲ ತಾಂತ್ರಿಕ ಕೌಶಲ್ಯಗಳಷ್ಟೇ ಅಲ್ಲದೆ, ಉದ್ಯೋಗ ಕ್ಷೇತ್ರದಲ್ಲಿ ಅಗತ್ಯವಾಗಿರುವ ಅಟೊಕ್ಯಾಡ್ ಕನ್ನಡ ಹಾಗೂ ಇಂಗ್ಲಿಷ್ ಭಾಷಾ ಕೌಶಲ್ಯಗಳು ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗುವ ಉದ್ಯೋಗ ಕೌಶಲ್ಯಗಳನ್ನೂ ಕಲಿಸಲಾಗುತ್ತದೆ.
ಜಿಟಿಟಿಸಿ ಸಂಸ್ಥೆಯ ಪ್ರಮುಖ ವೈಶಿಷ್ಟ್ಯವೆಂದರೆ, ಇಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಕೇವಲ ತರಗತಿ ಬೋಧನೆಗೆ ಸೀಮಿತವಾಗದೆ, ನೈಜ ಕೈಗಾರಿಕಾ ವಾತಾವರಣದಲ್ಲಿ ಆನ್-ದ-ಜಾಬ್ ತರಬೇತಿ ನೀಡಲಾಗುತ್ತದೆ. ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡಿರುವ ಜಿಟಿಟಿಸಿ ಕೇಂದ್ರವು ಸ್ಥಳೀಯ ಕೈಗಾರಿಕೆಗಳಿಗೆ ತಾಂತ್ರಿಕ ಸೇವೆಗಳನ್ನೂ ಒದಗಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ನೇರ ಅನುಭವ ದೊರೆಯುತ್ತದೆ.
ತರಬೇತಿ ಪೂರ್ಣಗೊಂಡ ಬಳಿಕ ಪ್ರತಿಷ್ಠಿತ ಟೂಲಿಂಗ್, ಉತ್ಪಾದನಾ ಹಾಗೂ ವಿಮಾನ ತಯಾರಿಕಾ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಭರವಸೆಯನ್ನು ಸಂಸ್ಥೆ ನೀಡಿದೆ. ಕಳೆದ ವರ್ಷ ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳೂ ವಿವಿಧ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆದಿರುವುದು ಜಿಟಿಟಿಸಿ ತರಬೇತಿಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಪರಿಣಿತ ತಂತ್ರಜ್ಞರಿಗೆ ಭಾರೀ ಬೇಡಿಕೆ ಇರುವ ಹಿನ್ನೆಲೆ, ಜಿಟಿಟಿಸಿಯಲ್ಲಿ ತರಬೇತಿ ಪಡೆದ ಯುವಕರಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಅವಕಾಶ ದೊರೆಯುತ್ತಿದೆ. ವಿಶೇಷವಾಗಿ ತಾಂತ್ರಿಕ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಗ್ರಾಮೀಣ ಮತ್ತು ನಗರ ಪ್ರದೇಶದ ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ.
ಆಸಕ್ತ ವಿದ್ಯಾರ್ಥಿಗಳು ಹಾಗೂ ಪಾಲಕರು ನರಗುಂದದ ಅಳಗವಾಡಿ ರಸ್ತೆಯಲ್ಲಿರುವ ಜಿಟಿಟಿಸಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 26, 2026 ಆಗಿದ್ದು, ತರಬೇತಿಗಳು ಜೂನ್ 1ರಿಂದ ಆರಂಭವಾಗಲಿವೆ.
ಹೆಚ್ಚಿನ ಮಾಹಿತಿಗಾಗಿ ಜಿಟಿಟಿಸಿ ಕೇಂದ್ರ, ಅರ್ಬನ್ ಗ್ರಾಮ, ಅಳಗವಾಡಿ ರಸ್ತೆ, ನರಗುಂದ ಸಂಪರ್ಕಿಸಬಹುದಾಗಿದ್ದು, ದೂರವಾಣಿ ಸಂಖ್ಯೆ 8088536896 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಹಿಂದೂಸ್ತಾನ್ ಸಮಾಚಾರ್ / lalita MP