ಯುಎವಿಯಿಂದಲೇ ಗುರಿ ಭೇದಿಸುವ ಕ್ಷಿಪಣಿ ಉಡಾವಣೆ ಯಶಸ್ವಿ ; ಡಿಆರ್ಡಿಒ ಮಹತ್ವದ ಸಾಧನೆ
ನವದೆಹಲಿ, 20 ಮೇ (ಹಿ.ಸ.) : ಆ್ಯಂಕರ್ : ಮಾನವರಹಿತ ವೈಮಾನಿಕ ವಾಹನದಿಂದ (ಯುಎವಿ) ನಿಖರ ನಿರ್ದೇಶಿತ ಕ್ಷಿಪಣಿಯನ್ನು ಉಡಾಯಿಸಿ ಶತ್ರುಗಳ ಡ್ರೋನ್, ಹೆಲಿಕಾಪ್ಟರ್ ಹಾಗೂ ಇತರೆ ವೈಮಾನಿಕ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಭಾರತ ಯಶಸ್ವಿಯಾಗಿ ಪ್ರದರ್ಶಿಸಿದೆ. ಆಂಧ್ರ ಪ್ರದೇಶದ ಕರುನೂಲು ಸಮೀಪ
ಕ್ಷಿಪಣಿ


ನವದೆಹಲಿ, 20 ಮೇ (ಹಿ.ಸ.) :

ಆ್ಯಂಕರ್ : ಮಾನವರಹಿತ ವೈಮಾನಿಕ ವಾಹನದಿಂದ (ಯುಎವಿ) ನಿಖರ ನಿರ್ದೇಶಿತ ಕ್ಷಿಪಣಿಯನ್ನು ಉಡಾಯಿಸಿ ಶತ್ರುಗಳ ಡ್ರೋನ್, ಹೆಲಿಕಾಪ್ಟರ್ ಹಾಗೂ ಇತರೆ ವೈಮಾನಿಕ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಭಾರತ ಯಶಸ್ವಿಯಾಗಿ ಪ್ರದರ್ಶಿಸಿದೆ.

ಆಂಧ್ರ ಪ್ರದೇಶದ ಕರುನೂಲು ಸಮೀಪದ ಡಿಆರ್ಡಿಒ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಂತಿಮ ಅಭಿವೃದ್ಧಿ ಪರೀಕ್ಷೆಯಲ್ಲಿ ಈ ಮಹತ್ವದ ಸಾಧನೆ ಸಾಧ್ಯವಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಯುಎಲ್ಪಿಜಿಎಂ–ವಿ3 ಕ್ಷಿಪಣಿಯನ್ನು ಗಾಳಿ-ಮೇಲ್ಮೈ ಹಾಗೂ ಗಾಳಿ-ಗಾಳಿ ದಾಳಿ ಸಾಮರ್ಥ್ಯ ಹೊಂದಿರುವ ಯುಎವಿಯಿಂದ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

ಡಿಆರ್ಡಿಒ ನೀಡಿದ ಮಾಹಿತಿಯ ಪ್ರಕಾರ, ಸಮಗ್ರ ನೆಲ ನಿಯಂತ್ರಣ ವ್ಯವಸ್ಥೆಯ ಮೂಲಕ ಈ ಪರೀಕ್ಷೆಗಳನ್ನು ನಡೆಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ವ್ಯವಸ್ಥೆ ಗುರಿ ಗುರುತಿಸುವಿಕೆ, ದಾಳಿ ಸಿದ್ಧತೆ ಹಾಗೂ ಕ್ಷಿಪಣಿ ಉಡಾವಣೆ ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸಿ ಕಾರ್ಯಾಚರಣೆಯ ನಿಖರತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ.

ಈ ಕ್ಷಿಪಣಿ ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ಹೈದರಾಬಾದ್ ಮೂಲದ ಭಾರತ ಡೈನಾಮಿಕ್ಸ್ ಲಿಮಿಟೆಡ್ ಹಾಗೂ ಅಡಾಣಿ ಡಿಫೆನ್ಸ್ ಸಿಸ್ಟಮ್ಸ್ ಅಂಡ್ ಟೆಕ್ನಾಲಜೀಸ್ ಸಂಸ್ಥೆಗಳೊಂದಿಗೆ ಡಿಆರ್ಡಿಒ ಸಹಭಾಗಿತ್ವ ಹೊಂದಿದೆ. ಪ್ರಸ್ತುತ ಪರೀಕ್ಷೆಗಾಗಿ ಬೆಂಗಳೂರು ಮೂಲದ ನ್ಯೂಸ್ಪೇಸ್ ರಿಸರ್ಚ್ ಅಂಡ್ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದ ಯುಎವಿಯಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು.

ಯುಎಲ್ಪಿಜಿಎಂ ಕ್ಷಿಪಣಿಯನ್ನು ಹೈದರಾಬಾದ್ನ ಇಮಾರತ್ ಸಂಶೋಧನಾ ಕೇಂದ್ರವನ್ನು ಪ್ರಧಾನ ಪ್ರಯೋಗಾಲಯವನ್ನಾಗಿ ಮಾಡಿಕೊಂಡು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ, ಟರ್ಮಿನಲ್ ಬ್ಯಾಲಿಸ್ಟಿಕ್ಸ್ ಸಂಶೋಧನಾ ಪ್ರಯೋಗಾಲಯ ಹಾಗೂ ಉನ್ನತ ಶಕ್ತಿ ವಸ್ತುಗಳ ಸಂಶೋಧನಾ ಪ್ರಯೋಗಾಲಯಗಳ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ರಕ್ಷಣಾ ಸಚಿವ ರಾಜನಾಥ ಸಿಂಗ್ ಈ ಯಶಸ್ವಿ ಪರೀಕ್ಷೆಗೆ ಡಿಆರ್ಡಿಒ, ಸಾರ್ವಜನಿಕ ವಲಯದ ಸಂಸ್ಥೆಗಳು ಹಾಗೂ ಕೈಗಾರಿಕಾ ಪಾಲುದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಟ್ಯಾಂಕ್ ವಿರೋಧಿ ಕಾರ್ಯಾಚರಣೆಗಳ ಜೊತೆಗೆ ಡ್ರೋನ್, ಹೆಲಿಕಾಪ್ಟರ್ ಮತ್ತು ಇತರೆ ವೈಮಾನಿಕ ಗುರಿಗಳ ವಿರುದ್ಧ ಗಾಳಿ-ಗಾಳಿ ದಾಳಿಯಲ್ಲೂ ಕ್ಷಿಪಣಿಯ ಯಶಸ್ಸು ಆತ್ಮನಿರ್ಭರ ಭಾರತದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.

ಡಿಆರ್ಡಿಒ ಅಧ್ಯಕ್ಷ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸಮೀರ್ ವಿ. ಕಾಮತ್ ಪರೀಕ್ಷೆಯಲ್ಲಿ ಪಾಲ್ಗೊಂಡ ಎಲ್ಲಾ ತಂಡಗಳಿಗೆ ಅಭಿನಂದನೆ ಸಲ್ಲಿಸಿ, ಇದು ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಸಾಧನೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande