ಅಕಾಲಿಕ ಮಳೆ ನೀರು ಸಂರಕ್ಷಣೆಗೆ “ಚೌಕ ಮಡಿ” ಪದ್ಧತಿ
ಗದಗ, 20 ಮೇ (ಹಿ.ಸ.) : ಆ್ಯಂಕರ್ : ಇತ್ತೀಚಿನ ವರ್ಷಗಳಲ್ಲಿ ಅನಿಶ್ಚಿತ ಹವಾಮಾನ, ಅಕಾಲಿಕ ಮಳೆ ಹಾಗೂ ಮಳೆಯ ಕೊರತೆಯಿಂದ ಕೃಷಿ ಕ್ಷೇತ್ರ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಒಂದು ಕಡೆ ಬೇಸಿಗೆಯಲ್ಲಿ ಸುರಿಯುವ ಅಕಾಲಿಕ ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದರೆ, ಮತ್ತೊಂದೆಡೆ ಮುಂಗಾರು ಸಮಯ
ಫೋಟೋ


ಗದಗ, 20 ಮೇ (ಹಿ.ಸ.) :

ಆ್ಯಂಕರ್ : ಇತ್ತೀಚಿನ ವರ್ಷಗಳಲ್ಲಿ ಅನಿಶ್ಚಿತ ಹವಾಮಾನ, ಅಕಾಲಿಕ ಮಳೆ ಹಾಗೂ ಮಳೆಯ ಕೊರತೆಯಿಂದ ಕೃಷಿ ಕ್ಷೇತ್ರ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಒಂದು ಕಡೆ ಬೇಸಿಗೆಯಲ್ಲಿ ಸುರಿಯುವ ಅಕಾಲಿಕ ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದರೆ, ಮತ್ತೊಂದೆಡೆ ಮುಂಗಾರು ಸಮಯದಲ್ಲಿ ಮಳೆಯ ಅಭಾವ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಯ ನೀರನ್ನು ಹೊಲದಲ್ಲಿಯೇ ಸಂರಕ್ಷಿಸಿ, ಭೂಮಿಯ ತೇವಾಂಶವನ್ನು ಉಳಿಸಿಕೊಳ್ಳುವ “ಚೌಕ ಮಡಿ” ಪದ್ಧತಿ ಇದೀಗ ರೈತರ ಗಮನ ಸೆಳೆಯುತ್ತಿದೆ.

ಗದಗ ಜಿಲ್ಲೆಯ ಕೋಟುಮುಚಗಿ ಗ್ರಾಮದ ಸಾವಯವ ಕೃಷಿಕ ವೀರೇಶ ನೇಗಲಿ ತಮ್ಮ ಕೃಷಿ ಜಮೀನಿನಲ್ಲಿ ಅಳವಡಿಸಿಕೊಂಡಿರುವ ಈ ವಿನೂತನ ಕೃಷಿ ಪದ್ಧತಿ ಈಗ ಸ್ಥಳೀಯ ರೈತರ ಮೆಚ್ಚುಗೆಗೆ ಪಾತ್ರವಾಗಿದೆ. ನೀರಿನ ಸಂರಕ್ಷಣೆ, ಮಣ್ಣಿನ ತೇವಾಂಶ ಕಾಪಾಡುವುದು ಹಾಗೂ ಬೆಳೆಗಳಿಗೆ ದೀರ್ಘಕಾಲ ತೇವಾಂಶ ಒದಗಿಸುವ ಉದ್ದೇಶದಿಂದ ಅನುಸರಿಸಲಾಗುತ್ತಿರುವ ಈ ವಿಧಾನ ಅನೇಕ ರೈತರಿಗೆ ಮಾದರಿಯಾಗಿದೆ.

ಹಿರಿಯ ರೈತರ ಪ್ರಕಾರ, “ಹರಿಯುವ ನೀರನ್ನು ನಿಲ್ಲಿಸುವುದು, ನಿಂತ ನೀರನ್ನು ಇಂಗಿಸುವುದು ಹಾಗೂ ಇಂಗಿದ ನೀರಿನ ತೇವಾಂಶವನ್ನು ಮಣ್ಣಿನಲ್ಲಿ ದೀರ್ಘಕಾಲ ಉಳಿಸಿಕೊಳ್ಳುವುದು” ಎಂಬ ತತ್ವದ ಮೇಲೆ ರೂಪುಗೊಂಡ ಕೃಷಿ ವಿಧಾನವೇ “ಚೌಕ ಮಡಿ” ಪದ್ಧತಿ. ಸಾಮಾನ್ಯವಾಗಿ ಮಳೆಯಾದಾಗ ನೀರು ವೇಗವಾಗಿ ಹರಿದು ಹೊಲದಿಂದ ಹೊರ ಹೋಗುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ಕುಗ್ಗುವುದರ ಜೊತೆಗೆ ಭೂಮಿಯಲ್ಲಿ ತೇವಾಂಶವೂ ಕಡಿಮೆಯಾಗುತ್ತದೆ. ಆದರೆ ಚೌಕ ಮಡಿ ಪದ್ಧತಿಯಲ್ಲಿ ಹೊಲವನ್ನು ಸಮರ್ಪಕವಾಗಿ ವಿಭಾಗಿಸಿ ಸಣ್ಣ ಸಣ್ಣ ಮಡಿಗಳನ್ನು ನಿರ್ಮಿಸುವುದರಿಂದ ನೀರು ಹೊಲದಲ್ಲೇ ನಿಂತು ನಿಧಾನವಾಗಿ ಭೂಮಿಯೊಳಗೆ ಇಂಗುತ್ತದೆ.

ಸಾವಯವ ಕೃಷಿಕ ವೀರೇಶ ನೇಗಲಿ ಅವರು ಹಿಂಗಾರಿ ಬೆಳೆ ಕಟಾವಿನ ಬಳಿಕ ತಮ್ಮ ಹೊಲವನ್ನು ಕುಂಟೆಯಿಂದ ಉಳುಮೆ ಮಾಡಿ, ನಂತರ ಹೊಲದಾದ್ಯಂತ ಚೌಕ ಮಡಿಗಳನ್ನು ನಿರ್ಮಿಸಿದ್ದಾರೆ. ಈ ಕ್ರಮದಿಂದ ಅಕಾಲಿಕ ಮಳೆಯ ನೀರು ವೇಗವಾಗಿ ಹರಿದು ಹೋಗದೇ, ಹೊಲದಲ್ಲೇ ನಿಂತು ನಿಧಾನವಾಗಿ ಮಣ್ಣಿನೊಳಗೆ ಸೇರುತ್ತಿದೆ. ಪರಿಣಾಮವಾಗಿ ಭೂಮಿಯಲ್ಲಿ ದೀರ್ಘಕಾಲ ತೇವಾಂಶ ಉಳಿಯುತ್ತಿದ್ದು, ಮುಂದಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಸಾಕಷ್ಟು ಅನುಕೂಲವಾಗುತ್ತಿದೆ.

“ಮಳೆಯ ನೀರನ್ನು ಹೊಲದಲ್ಲೇ ಉಳಿಸಿದರೆ ಭೂಮಿಯ ತೇವಾಂಶ ಹೆಚ್ಚಾಗಿ ಬೆಳೆಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ನೀರು ಹೊರಗೆ ಹರಿದು ಹೋಗದಂತೆ ತಡೆದರೆ ಮಣ್ಣಿನ ಶಕ್ತಿ ಹೆಚ್ಚುತ್ತದೆ. ಈ ವಿಧಾನವನ್ನು ಹೆಚ್ಚು ರೈತರು ಅಳವಡಿಸಿಕೊಳ್ಳಬೇಕು” ಎಂದು ಸಾವಯವ ಕೃಷಿಕ ವೀರೇಶ ನೇಗಲಿ ತಿಳಿಸಿದ್ದಾರೆ.

ಈ ವಿಧಾನದಿಂದ ಇನ್ನೊಂದು ಪ್ರಮುಖ ಲಾಭವೂ ದೊರೆಯುತ್ತಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬಳಿಕ ಮಳೆ ಕೈಕೊಟ್ಟರೂ, ಭೂಮಿಯಲ್ಲಿ ಈಗಾಗಲೇ ಸಂಗ್ರಹವಾಗಿರುವ ತೇವಾಂಶ ಬೆಳೆಗಳನ್ನು ಒಣಗದಂತೆ ಕಾಪಾಡುತ್ತದೆ. ಇದರಿಂದ ಬೆಳೆ ಬೆಳವಣಿಗೆಗೆ ಅಗತ್ಯವಾದ ತೇವಾಂಶ ಲಭ್ಯವಾಗುವುದರ ಜೊತೆಗೆ ಇಳುವರಿಯ ಮೇಲಿನ ಹಾನಿಯೂ ಕಡಿಮೆಯಾಗುತ್ತದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ನೀರಿನ ಅಭಾವ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ. ಬೋರ್ವೆಲ್ಗಳು ಬತ್ತುತ್ತಿದ್ದು, ಮಳೆಯ ಮೇಲಿನ ಅವಲಂಬನೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಕಡಿಮೆ ವೆಚ್ಚದಲ್ಲಿ ಅನುಸರಿಸಬಹುದಾದ “ಚೌಕ ಮಡಿ” ಪದ್ಧತಿ ರೈತರಿಗೆ ಪರಿಣಾಮಕಾರಿ ಪರ್ಯಾಯ ಕೃಷಿ ಕ್ರಮವಾಗಿ ಮೂಡಿ ಬಂದಿದೆ. ವಿಶೇಷವಾಗಿ ಮಳೆ ಆಧಾರಿತ ಕೃಷಿ ಪ್ರದೇಶಗಳಲ್ಲಿ ಈ ವಿಧಾನ ಹೆಚ್ಚು ಉಪಯುಕ್ತವಾಗಲಿದೆ ಎಂದು ಕೃಷಿ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ಹಾಗೂ ನೀರು ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಕಾಲದ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚೌಕ ಮಡಿ ಪದ್ಧತಿ ರೈತರಿಗೆ ಹೊಸ ದಾರಿ ತೋರಿಸುತ್ತಿದ್ದು, ನೀರಿನ ಸಮರ್ಪಕ ಬಳಕೆ, ಮಣ್ಣಿನ ಆರೋಗ್ಯ ಕಾಪಾಡುವುದು ಹಾಗೂ ಉತ್ತಮ ಇಳುವರಿ ಪಡೆಯಲು ನೆರವಾಗುತ್ತಿದೆ.

ರೈತರು ತಮ್ಮ ಹೊಲಗಳ ಸುತ್ತ ಬದುವು ನಿರ್ಮಿಸಿ, ಮಳೆಯ ನೀರನ್ನು ಸಂರಕ್ಷಿಸುವತ್ತ ಗಮನಹರಿಸಬೇಕು. ನೀರನ್ನು ವ್ಯರ್ಥವಾಗಿ ಹರಿದು ಹೋಗಲು ಬಿಡದೇ, ಭೂಮಿಯೊಳಗೆ ಇಂಗುವಂತೆ ಮಾಡುವ ಇಂತಹ ಕೃಷಿ ಕ್ರಮಗಳನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ನೀರಿನ ಸಮಸ್ಯೆಯನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಿಸಬಹುದು ಎಂದು ಸಾವಯವ ಕೃಷಿಕ ವೀರೇಶ ನೇಗಲಿ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ, ಅನಿಶ್ಚಿತ ಹವಾಮಾನ ವೈಪರೀತ್ಯದ ನಡುವೆಯೂ ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಕೈಗೊಂಡಿರುವ ಕೋಟುಮುಚಗಿ ಗ್ರಾಮದ ರೈತನ “ಚೌಕ ಮಡಿ” ಪದ್ಧತಿ ಈಗ ಇತರ ರೈತರಿಗೆ ಪ್ರೇರಣೆಯಾಗಿದ್ದು, ನೀರು ಸಂರಕ್ಷಣೆ ಆಧಾರಿತ ಸುಸ್ಥಿರ ಕೃಷಿಯತ್ತ ಮಹತ್ವದ ಹೆಜ್ಜೆಯಾಗಿ ಕಾಣುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande