ಶಿಕ್ಷಣದ ಜೊತೆಗೆ ಧರ್ಮ ಸಂಸ್ಕಾರವೂ ಅಗತ್ಯ : ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ
ಗದಗ, 20 ಮೇ (ಹಿ.ಸ.) : ಆ್ಯಂಕರ್ : ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ, ಧರ್ಮ ಸಂಸ್ಕಾರ ಮತ್ತು ಭಾರತೀಯ ಸಂಸ್ಕೃತಿಯೂ ಅಷ್ಟೇ ಮುಖ್ಯವಾಗಿದೆ ಎಂದು ಬನ್ನಿಕೊಪ್ಪ–ಮೈಸೂರು ಅರಮನೆ ಜಪದ ಕಟ್ಟೆಮಠದ ಪೂಜ್ಯ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ವಿವೇಕಾನಂದ ನಗರದ ಸ್ವಾಮಿ ವಿವೇಕಾನಂದ
ಫೋಟೋ


ಗದಗ, 20 ಮೇ (ಹಿ.ಸ.) :

ಆ್ಯಂಕರ್ : ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ, ಧರ್ಮ ಸಂಸ್ಕಾರ ಮತ್ತು ಭಾರತೀಯ ಸಂಸ್ಕೃತಿಯೂ ಅಷ್ಟೇ ಮುಖ್ಯವಾಗಿದೆ ಎಂದು ಬನ್ನಿಕೊಪ್ಪ–ಮೈಸೂರು ಅರಮನೆ ಜಪದ ಕಟ್ಟೆಮಠದ ಪೂಜ್ಯ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ವಿವೇಕಾನಂದ ನಗರದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಆಯೋಜಿಸಿದ್ದ “ಜೀವನ ದರ್ಶನ” ಪ್ರವಚನ ಮಾಲಿಕೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಆದರೆ ಕೇವಲ ಪುಸ್ತಕದ ಜ್ಞಾನ ಮಾತ್ರ ಮಕ್ಕಳ ಬದುಕನ್ನು ಸಮಗ್ರವಾಗಿ ರೂಪಿಸಲು ಸಾಕಾಗುವುದಿಲ್ಲ. ಶಿಕ್ಷಣದ ಜೊತೆಗೆ ಧಾರ್ಮಿಕ ಮೌಲ್ಯಗಳು, ನೈತಿಕತೆ, ಸಂಸ್ಕಾರ ಮತ್ತು ಭಾರತೀಯ ಸಂಸ್ಕೃತಿಯ ಅರಿವು ಮಕ್ಕಳಲ್ಲಿ ಬೆಳೆಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ವ್ಯಕ್ತಿಯಲ್ಲಿ ಸತ್ಯ, ಪ್ರಾಮಾಣಿಕತೆ, ಮಾನವೀಯತೆ ಮತ್ತು ಉತ್ತಮ ಸಂಸ್ಕಾರಗಳು ಸಹಜವಾಗಿ ಬೆಳೆಯುತ್ತವೆ. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಬೇಕಾದರೆ ಬಾಲ್ಯದಿಂದಲೇ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು. ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣದ ಜೊತೆಗೆ ಉತ್ತಮ ಜೀವನ ಮೌಲ್ಯಗಳು ಮತ್ತು ಸಂಸ್ಕಾರಗಳನ್ನು ನೀಡುವ ಜವಾಬ್ದಾರಿ ಹೊಂದಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ಸಮಾಜದಲ್ಲಿ ತಂತ್ರಜ್ಞಾನ ಮತ್ತು ಆಧುನಿಕ ಜೀವನಶೈಲಿಯ ಪ್ರಭಾವ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಯುವ ಪೀಳಿಗೆ ತಮ್ಮ ಮೂಲ ಸಂಸ್ಕೃತಿಯಿಂದ ದೂರವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಯುವಕರು ತಮ್ಮ ಸಂಸ್ಕೃತಿ, ಧರ್ಮ ಮತ್ತು ಪರಂಪರೆಯ ಮಹತ್ವವನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಕಳೆದ ಹಲವು ವರ್ಷಗಳಿಂದ ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವುದು ಅಭಿನಂದನೀಯ. ಪ್ರತಿಯೊಬ್ಬ ಯುವಕ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಉತ್ತಮ ಜೀವನ ಮೌಲ್ಯಗಳು ಅಗತ್ಯವಾಗಿದ್ದು, ನಿರಂತರವಾಗಿ “ಜೀವನ ದರ್ಶನ” ಕಾರ್ಯಕ್ರಮ ಆಯೋಜಿಸುತ್ತಿರುವ ಸಮಿತಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಎಂ. ನರೇಗಲ್ಲ ಮಾತನಾಡಿ, ಸಮಿತಿಯು ಕಳೆದ 58 ತಿಂಗಳಿನಿಂದ ನಿರಂತರವಾಗಿ “ಜೀವನ ದರ್ಶನ” ಪ್ರವಚನ ಮಾಲಿಕೆಯನ್ನು ಆಯೋಜಿಸುತ್ತಿದ್ದು, ಕಿರಿಯರಿಂದ ಹಿರಿಯರವರೆಗೆ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಸಮಾಜದಲ್ಲಿ ಉತ್ತಮ ಚಿಂತನೆಗಳು ಬೆಳೆಯಬೇಕಾದರೆ ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯ. ಪ್ರವಚನ, ಉಪನ್ಯಾಸ ಮತ್ತು ಸಂವಾದಗಳ ಮೂಲಕ ಜನರಲ್ಲಿ ಮೌಲ್ಯಾಧಾರಿತ ಬದುಕಿನ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ “ವೃದ್ಧಾಪ್ಯದಲ್ಲಿ ಆರೋಗ್ಯ ಸಂರಕ್ಷಣೆ” ವಿಷಯ ಕುರಿತು ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯ ಡಾ. ಉಮೇಶ ಪುರದ ಅವರು, ಆಧುನಿಕ ಜೀವನಶೈಲಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

“ನಾವು ಸಂಪಾದನೆಗಾಗಿ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ನಂತರ ಕಳೆದುಕೊಂಡ ಆರೋಗ್ಯವನ್ನು ಮರಳಿ ಪಡೆಯಲು ಹಣ ವ್ಯಯಿಸುತ್ತಿದ್ದೇವೆ. ಈ ಮನೋಭಾವ ಬದಲಾಗಬೇಕು” ಎಂದು ಅವರು ಹೇಳಿದರು.

45 ರಿಂದ 50 ವರ್ಷ ವಯಸ್ಸಿನವರು ಕನಿಷ್ಠ ಮೂರು ತಿಂಗಳಿಗೆ ಒಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯಕ. ನಿಯಮಿತ ವ್ಯಾಯಾಮ, ಯೋಗ, ಧ್ಯಾನ, ಸಮತೋಲನ ಆಹಾರ ಪದ್ಧತಿ ಮತ್ತು ಸಾಂಪ್ರದಾಯಿಕ ಆಹಾರ ಸೇವನೆ ಆರೋಗ್ಯಕರ ಜೀವನಕ್ಕೆ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.

ಬಿಪಿ ಹಾಗೂ ಮಧುಮೇಹ ಸಮಸ್ಯೆಗಳ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅಗತ್ಯ ಮುಂಜಾಗ್ರತೆ ಮತ್ತು ವೈದ್ಯಕೀಯ ಸಲಹೆಗಳನ್ನು ಅನುಸರಿಸುವುದು ಅತ್ಯವಶ್ಯಕ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಚಿಂತಕ ವಸಂತಗೌಡ ಪೊಲೀಸ್ ಪಾಟೀಲ ಮಾತನಾಡಿ, ಮೇ 31ರಂದು ಗದಗದ ವಿಡಿಎಸ್ಟಿ ಮೈದಾನದಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದ ಕುರಿತು ಮಾಹಿತಿ ನೀಡಿ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಶಿಕ್ಷಣ ಕ್ಷೇತ್ರದ ಸಾಧಕರಿಗೆ ಪ್ರೋತ್ಸಾಹ ನೀಡಲಾಯಿತು. ಭೂಮಿಕಾ ರವಿ ಖೋಡೆ, ಗೌತಮ ಸತೀಶ ಚೂರಿ, ಶಶಾಂಕ ಶಿವಕುಮಾರ ಕುರಿಯವರ, ಶ್ರೇಯಸ್ ಬಸವರಾಜ ರಾಜಪೂರ, ಪ್ರತೀಕ್ಷಾ ಮಲ್ಲಿಕಾರ್ಜುನ ಉಪ್ಪಿನ ಹಾಗೂ ಜ್ಯೋತಿಕಾ ಮಹಾಂತೇಶ ಮಸ್ಕಿ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಇದೇ ವೇಳೆ ಶಿಕ್ಷಕ ಎನ್.ವಿ. ಪಾಟೀಲ, ಸಮಿತಿಯ ಕಾರ್ಯದರ್ಶಿ ಗುಳಗೌಡರ, ಕೋಶಾಧ್ಯಕ್ಷ ಎಸ್.ಎಸ್. ಪಾಳೇಗಾರ ಹಾಗೂ ಬಿಎಸ್ಎನ್ಎಲ್ ನಿವೃತ್ತ ನೌಕರರಾದ ಶ್ರೀಮತಿ ನಿರ್ಮಲಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸುದರ್ಶನ ಹಾನಗಲ್ಲ, ಆರ್.ಬಿ. ಅಂದಪ್ಪನವರ, ವಿ.ಆರ್. ಗೊಬ್ಬರಗುಂಪಿ, ಸಾಗರ ಬಿಂಗಿ, ಬಿ.ಎನ್. ಯರನಾಳ, ಎಸ್.ಎಸ್. ಪಾಟೀಲ, ಎಂ.ಬಿ. ಚನ್ನಪ್ಪಗೌಡ್ರ, ಎಂ.ಕೆ. ತುಪ್ಪದ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande