
ನವದೆಹಲಿ, 20 ಮೇ (ಹಿ.ಸ.) :
ಆ್ಯಂಕರ್ : ದೇಶದಲ್ಲಿ ಬಹುವಿಷಯಕ ಸಂಶೋಧನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವು “ಬಹುವಿಷಯಕ ಸಂಶೋಧನಾ ಶ್ರೇಷ್ಠತಾ ಕೇಂದ್ರ” ಯೋಜನೆಯಡಿ 10 ಪ್ರಮುಖ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳನ್ನು ಆಯ್ಕೆ ಮಾಡಿದೆ.
ಸಾಮಾಜಿಕ ವಿಜ್ಞಾನ, ಮಾನವಿಕ ಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಟ್ಟದ ಸಂಕೀರ್ಣ ಸಮಸ್ಯೆಗಳಿಗೆ ಸಂಶೋಧನಾ ಆಧಾರಿತ ಪರಿಹಾರಗಳನ್ನು ಕಂಡುಹಿಡಿಯುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಪ್ರತಿಷ್ಠಾನ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ಯೋಜನೆ ರಾಷ್ಟ್ರೀಯ ಶಿಕ್ಷಣ ನೀತಿ–2020 ಹಾಗೂ “ವಿಕಸಿತ ಭಾರತ–2047” ಪರಿಕಲ್ಪನೆಗೆ ಅನುಗುಣವಾಗಿ ರೂಪಿಸಲಾಗಿದೆ. ವಿವಿಧ ಕ್ಷೇತ್ರಗಳ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸಮಾಜ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಸವಾಲುಗಳಿಗೆ ಕಾರ್ಯೋಚಿತ ಪರಿಹಾರಗಳನ್ನು ರೂಪಿಸುವುದು ಯೋಜನೆಯ ಪ್ರಮುಖ ಗುರಿಯಾಗಿದೆ.
ಯೋಜನೆಗೆ ಆಯ್ಕೆಯಾದ ಸಂಸ್ಥೆಗಳಲ್ಲಿ ಗಾಂಧಿನಗರ ಭಾರತೀಯ ತಾಂತ್ರಿಕ ಸಂಸ್ಥೆ, ಮದ್ರಾಸ್ ಭಾರತೀಯ ತಾಂತ್ರಿಕ ಸಂಸ್ಥೆ, ಧಾರವಾಡ ಭಾರತೀಯ ತಾಂತ್ರಿಕ ಸಂಸ್ಥೆ, ಕಾನ್ಪುರ ಭಾರತೀಯ ತಾಂತ್ರಿಕ ಸಂಸ್ಥೆ, ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ, ಅಗರ್ತಲಾ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ, ಜಮ್ಮು ಭಾರತೀಯ ನಿರ್ವಹಣಾ ಸಂಸ್ಥೆ, ಮಾನವ ಅಭಿವೃದ್ಧಿ ಸಂಸ್ಥೆ, ಚಾಣಕ್ಯ ವಿಶ್ವವಿದ್ಯಾಲಯ ಹಾಗೂ ಪಿಎಸ್ಜಿಆರ್ ಕೃಷ್ಣಮ್ಮಾಳ ಮಹಿಳಾ ಕಾಲೇಜು ಸೇರಿವೆ.
ಈ ಕೇಂದ್ರಗಳಲ್ಲಿ ಹವಾಮಾನ ಬದಲಾವಣೆ, ಪರಂಪರಾಗತ ಜ್ಞಾನ ವ್ಯವಸ್ಥೆ, ಕೃತಕ ಬುದ್ಧಿಮತ್ತೆ, ಗ್ರಾಮೀಣ ಜೀವನೋಪಾಯ, ಭಾಷಾ ಅಧ್ಯಯನ, ಆರೋಗ್ಯ ಮತ್ತು ಮನೋವಿಜ್ಞಾನ, ಡಿಜಿಟಲ್ ಮಾನವಿಕ ಶಾಸ್ತ್ರ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕುರಿತ ಸಂಶೋಧನೆಗಳಿಗೆ ಆದ್ಯತೆ ನೀಡಲಾಗುತ್ತದೆ.
ದೇಶದಾದ್ಯಂತದಿಂದ ಒಟ್ಟು 945 ಪ್ರಸ್ತಾವನೆಗಳು ಬಂದಿದ್ದು, ತಜ್ಞರ ಸಮಗ್ರ ಮೌಲ್ಯಮಾಪನದ ಬಳಿಕ 10 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಯೋಜನೆಗಳಲ್ಲಿ 20 ಸಹಭಾಗಿ ಸಂಸ್ಥೆಗಳೂ ಸೇರಿವೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳು, ಭಾರತೀಯ ತಾಂತ್ರಿಕ ಸಂಸ್ಥೆಗಳು, ರಾಷ್ಟ್ರೀಯ ತಾಂತ್ರಿಕ ಸಂಸ್ಥೆಗಳು, ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ವಿವಿಧ ಸಂಶೋಧನಾ ಸಂಸ್ಥೆಗಳು ಭಾಗಿಯಾಗಿವೆ.
ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್ ಮತ್ತು ಬೃಹತ್ ದತ್ತಾಂಶ ವಿಶ್ಲೇಷಣೆಗಳಂತಹ ಆಧುನಿಕ ತಂತ್ರಜ್ಞಾನಗಳ ವೇಗದ ಬೆಳವಣಿಗೆಯ ನಡುವೆ ಬಹುವಿಷಯಕ ಸಂಶೋಧನೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ಹಾಗೂ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಮಹತ್ವದ ಬಲ ನೀಡಲಿದೆ ಎಂದು ಪ್ರತಿಷ್ಠಾನ ತಿಳಿಸಿದೆ.
ಈ ಯೋಜನೆಯಿಂದ ದೇಶದಲ್ಲಿ ಸಂಶೋಧನಾ ಸಂಸ್ಕೃತಿ ಮತ್ತಷ್ಟು ಬಲಪಡೆಯುವುದರ ಜೊತೆಗೆ ನವೀನತೆ, ನೀತಿ ರೂಪಣೆ ಮತ್ತು ತಾಂತ್ರಿಕ ಅಭಿವೃದ್ಧಿಗೂ ಹೊಸ ಚೈತನ್ಯ ದೊರೆಯಲಿದೆ ಎಂದು ಪ್ರತಿಷ್ಠಾನ ಅಭಿಪ್ರಾಯಪಟ್ಟಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.