
ಬೆಂಗಳೂರು, 02 ಮೇ (ಹಿ.ಸ.) :
ಆ್ಯಂಕರ್ : ಪಂಚ ರಾಜ್ಯಗಳ ಮತದಾನ ಮುಗಿದ ಕೂಡಲೇ ಕೇಂದ್ರದ ಬಿಜೆಪಿ ಸರ್ಕಾರ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಹಾಗೂ ಆಟೋ ಗ್ಯಾಸ್ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿರುವುದು ಖಂಡನೀಯ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಅವರು, “ಈ ನಿರ್ಧಾರ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ನೇರ ಹೊರೆ ಹಾಕುತ್ತದೆ. ಮಾರ್ಚ್ 1ರಿಂದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಸುಮಾರು ₹1300 ರಷ್ಟು ಏರಿಕೆ ಆಗಿದೆ. ಇದರ ಪರಿಣಾಮವಾಗಿ ಹೋಟೆಲ್ಗಳು, ಟೀ ಅಂಗಡಿಗಳು ಮತ್ತು ಸಣ್ಣ ವ್ಯಾಪಾರಿಗಳು ತಮ್ಮ ಸೇವೆಗಳ ದರ ಹೆಚ್ಚಿಸಲು ಅನಿವಾರ್ಯವಾಗುತ್ತದೆ. ಅಂತಿಮವಾಗಿ ಈ ಹೊರೆ ಸಾಮಾನ್ಯ ಜನರ ಮೇಲೇ ಬೀಳುತ್ತದೆ” ಎಂದು ಹೇಳಿದರು.
ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆಯಲ್ಲಿ ಅನಿಲ ಪೂರೈಕೆ ಸಮಸ್ಯೆ ಎದುರಿಸುತ್ತಿರುವ ಹೋಟೆಲ್ಗಳು ಸಂಕಷ್ಟದಲ್ಲಿದ್ದು, ಕೆಲವೆಡೆ ಬಂದ್ ಆಗಿರುವುದರಿಂದ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿಯೇ ಪ್ರತಿ ಸಿಲಿಂಡರ್ಗೆ ₹993 ರಷ್ಟು ಹೆಚ್ಚಳ ಮಾಡಿರುವುದು ಕಾರ್ಮಿಕ ದಿನದಂದೇ ಕಾರ್ಮಿಕ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು.
ಇದಲ್ಲದೆ, ಸಿ.ಎನ್.ಜಿ. ಅನಿಲಕ್ಕಾಗಿ ಸರತಿಯಲ್ಲಿ ನಿಂತರೂ ಸಿಗದ ಪರಿಸ್ಥಿತಿಯಲ್ಲಿ ತತ್ತರಿಸುತ್ತಿರುವ ಆಟೋ ಚಾಲಕರ ಮೇಲೂ ಈ ದರ ಏರಿಕೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಖಂಡ್ರೆ ಹೇಳಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಅಡುಗೆ ಅನಿಲ ದರದಲ್ಲಿ ಸಣ್ಣ ಏರಿಕೆಯಾದರೂ ಗದ್ದಲ ಮಾಡುತ್ತಿದ್ದ ಬಿಜೆಪಿ ನಾಯಕರು, ಇಂದಿನ ಭಾರೀ ದರ ಏರಿಕೆ ಕುರಿತು ಮೌನವಾಗಿರುವುದು ಅರ್ಥವಾಗದು. ಅವರು ತಮ್ಮ ನಿಲುವು ಸ್ಪಷ್ಟಪಡಿಸಲಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದ ವಿರುದ್ಧ ಮಾತನಾಡುವ ಧೈರ್ಯ ತೋರಿಸಲಿ ಎಂದು ಅವರು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa