ಕುಡಿಯುವ ನೀರಿನ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಗೋವಿಂದ ಕಾರಜೋಳ ಸೂಚನೆ
ಚಿತ್ರದುರ್ಗ, 19 ಮೇ (ಹಿ.ಸ.) : ಆ್ಯಂಕರ್ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಕ್ಷಣ ಪರ್ಯಾಯ ವ್ಯವಸ್ಥೆಯ ಮೂಲಕ ನೀರು ಪೂರೈಸುವಂತೆ ಸಂಸದ ಗೋವಿಂದ ಎಂ. ಕಾರಜೋಳ ಅಧಿಕಾರಿ
Mp meeting


ಚಿತ್ರದುರ್ಗ, 19 ಮೇ (ಹಿ.ಸ.) :

ಆ್ಯಂಕರ್ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಕ್ಷಣ ಪರ್ಯಾಯ ವ್ಯವಸ್ಥೆಯ ಮೂಲಕ ನೀರು ಪೂರೈಸುವಂತೆ ಸಂಸದ ಗೋವಿಂದ ಎಂ. ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತುರ್ತು ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಬೋರ್ವೆಲ್ಗಳು ವಿಫಲಗೊಂಡಿರುವ ಹಾಗೂ ಖಾಸಗಿ ಬೋರ್ವೆಲ್ಗಳು ಲಭ್ಯವಿಲ್ಲದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಓಬಳಾಪುರ ತಾಂಡಾದಂತಹ ಪ್ರದೇಶಗಳಿಗೆ ಸಮೀಪದ ಗ್ರಾಮಗಳ ಆರ್.ಓ. ಘಟಕಗಳಿಂದ 20 ಲೀಟರ್ ಕುಡಿಯುವ ನೀರಿನ ಕ್ಯಾನ್ಗಳನ್ನು ಪೂರೈಸಲು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಇದಕ್ಕಾಗಿ ಆಟೋ ಟ್ರಾಲಿ ಅಥವಾ ಕಂಟೈನರ್ ವಾಹನಗಳನ್ನು ಬಾಡಿಗೆಗೆ ಪಡೆದು ನೀರು ವಿತರಿಸುವ ವ್ಯವಸ್ಥೆ ರೂಪಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿರುವುದು ವಾಸ್ತವ. ಆದರೆ ಜನರಿಗೆ ಕುಡಿಯುವ ನೀರು ಒದಗಿಸುವುದು ಮೊದಲ ಆದ್ಯತೆ ಎಂದು ತಿಳಿಸಿದ ಅವರು, ಬತ್ತಿಹೋಗಿರುವ ಬೋರ್ವೆಲ್ಗಳಿಗೆ ‘ಹೈಡ್ರೋ ಫ್ರಾಕ್ಚರಿಂಗ್’ ತಂತ್ರಜ್ಞಾನ ಬಳಸುವ ಮೂಲಕ ಮರುಪೂರಣ ಮಾಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಇರುವ ಪೈಪ್ಲೈನ್ ಸಂಪರ್ಕಗಳನ್ನು ಬಳಸಿ ಅಗತ್ಯವಿರುವ ಪ್ರದೇಶಗಳಿಗೆ ನೀರು ಹರಿಸುವಂತೆ ಸೂಚಿಸಿದರು.

ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆಕಾಶ್, ಕಳೆದ ವರ್ಷ ಜಿಲ್ಲೆಯಾದ್ಯಂತ 800ಕ್ಕೂ ಹೆಚ್ಚು ಹೊಸ ಬೋರ್ವೆಲ್ಗಳನ್ನು ಕೊರೆಯಲಾಗಿತ್ತು. ಆದರೆ ಈ ಬಾರಿ ಹೊಸ ಬೋರ್ವೆಲ್ ಕೊರೆಯುವಿಕೆಯನ್ನು ಗರಿಷ್ಠ ಮಟ್ಟಿಗೆ ನಿಯಂತ್ರಿಸಲಾಗಿದ್ದು, ಕೇವಲ 70 ಹೊಸ ಬೋರ್ವೆಲ್ಗಳನ್ನು ಮಾತ್ರ ಕೊರೆಯಲಾಗಿದೆ ಎಂದು ಹೇಳಿದರು.

ಟ್ಯಾಂಕರ್ ನೀರು ಪೂರೈಕೆಯನ್ನು ಕಡಿಮೆ ಮಾಡಿ, ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆದು ಸಾರ್ವಜನಿಕರಿಗೆ ನೀರು ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಹಿರಿಯೂರು ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳ 23 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, 24 ಹೊಸ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಈ ಪೈಕಿ 7 ಬೋರ್ವೆಲ್ಗಳು ವಿಫಲವಾಗಿವೆ ಎಂದು ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ ಒಟ್ಟು 181 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, 175 ಕಾರ್ಯನಿರ್ವಹಿಸುತ್ತಿವೆ. ಎರಡು ಘಟಕಗಳು ದುರಸ್ತಿ ಹಂತದಲ್ಲಿದ್ದು, ನಾಲ್ಕು ಸ್ಥಗಿತಗೊಂಡಿವೆ ಎಂದು ಹೇಳಿದರು.

ಕುಡಿಯುವ ನೀರಿನ ಸರಬರಾಜಿಗಾಗಿ ರೂ.65 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದ್ದು, ಕಿರಿಯ ಇಂಜಿನಿಯರ್ಗಳು ಸಮಸ್ಯಾತ್ಮಕ ಗ್ರಾಮಗಳಿಗೆ ಭೇಟಿ ನೀಡಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಜಲ ಜೀವನ ಮಿಷನ್ ಯೋಜನೆಯಡಿ ಕೈಗೊಂಡ ಕಾಮಗಾರಿಗಳಿಂದ ಜಿಲ್ಲೆಯ ಹಲವೆಡೆ ನೀರಿನ ಸಮಸ್ಯೆ ಕಡಿಮೆಯಾಗಿದೆ. ಹೊಸ ಓವರ್ಹೆಡ್ ಟ್ಯಾಂಕ್ ನಿರ್ಮಾಣ, ಹಳೆಯ ಟ್ಯಾಂಕ್ಗಳ ದುರಸ್ತಿ ಹಾಗೂ ಪೈಪ್ಲೈನ್ ವಿಸ್ತರಣೆ ಕಾಮಗಾರಿಗಳಿಂದ ಪರಿಸ್ಥಿತಿ ಸುಧಾರಿಸಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು.

ಬಾಕಿ ಉಳಿದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸಂಸದ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್, ಸಹಾಯಕ ಇಂಜಿನಿಯರ್ ಅಷಮ್ ಪಾಷ್, ತಾಲ್ಲೂಕು ಪಂಚಾಯಿತಿ ಇಒ ಪ್ರಮೋದ್ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande