
ಇಂಫಾಲ್, 19 ಮೇ (ಹಿ.ಸ.) :
ಆ್ಯಂಕರ್ : ಮಣಿಪುರದಲ್ಲಿ ಭಾರತ–ಮ್ಯಾನ್ಮಾರ್ ಗಡಿಭಾಗದಲ್ಲಿ ಭದ್ರತಾ ಪಡೆಗಳು ನಡೆಸಿದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ನಿಷೇಧಿತ ಸಂಘಟನೆಗಳಾದ ಪಿಎಲ್ಎ, ಯುಎನ್ಎಲ್ಎಫ್ ಮತ್ತು ಕೆವೈಕೆಎಲ್ ಸಂಘಟನೆಗಳಿಗೆ ಸೇರಿದ ಹಲವು ಸಕ್ರಿಯ ಉಗ್ರರನ್ನು ಬಂಧಿಸಲಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಈ ಬಂಧನಗಳು ನಡೆದಿದ್ದು, ಕೇಂದ್ರ ಪಡೆಗಳು ಮತ್ತು ಮಣಿಪುರ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಈ ಯಶಸ್ಸು ದೊರಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಂಗ್ನೌಪಾಲ್ ಜಿಲ್ಲೆಯ ಮೊರೆಹ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿಪಿ-77 ಮತ್ತು ಬಿಪಿ-79 ನಡುವೆ ನಡೆದ ಕಾರ್ಯಾಚರಣೆಯಲ್ಲಿ ಪಿಎಲ್ಎ ಸಂಘಟನೆಯ ಮೂವರು ಸಕ್ರಿಯ ಸದಸ್ಯರನ್ನು ಬಂಧಿಸಲಾಗಿದೆ.
ಬಂಧಿತರನ್ನು ವಿವಿಧ ಜಿಲ್ಲೆಗಳ ನಿವಾಸಿಗಳಾಗಿ ಗುರುತಿಸಲಾಗಿದ್ದು, ಅವರು ಗಡಿಭಾಗದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ.
ಥೌಬಲ್ ಜಿಲ್ಲೆಯ ಯೈರಿಪೋಕ್ ಪ್ರದೇಶದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಯುಎನ್ಎಲ್ಎಫ್ (ಕೊಯಿರೆಂಗ್) ಸಂಘಟನೆಯ ಒಬ್ಬ ಸಕ್ರಿಯ ಸದಸ್ಯನನ್ನು ಬಂಧಿಸಲಾಗಿದೆ. ಆರೋಪಿತನು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಸಾಗಣೆಯಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನಿಂದ ಮ್ಯಾಗಜಿನ್, ಮೊಬೈಲ್ ಫೋನ್, ಸಿಮ್ ಕಾರ್ಡ್ಗಳು, ಪವರ್ ಬ್ಯಾಂಕ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಲಾಂಫೆಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೆವೈಕೆಎಲ್ ಸಂಘಟನೆಯ ಇಬ್ಬರು ಸಕ್ರಿಯ ಸದಸ್ಯರನ್ನು ಬಂಧಿಸಲಾಗಿದೆ. ಇವರನ್ನು ವಿವಿಧ ಸ್ಥಳಗಳಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾರತ–ಮ್ಯಾನ್ಮಾರ್ ಗಡಿಭಾಗದಲ್ಲಿ ಉಗ್ರ ಸಂಘಟನೆಗಳ ಚಟುವಟಿಕೆಗಳನ್ನು ತಡೆಯಲು ಭದ್ರತಾ ಪಡೆಗಳು ತೀವ್ರ ನಿಗಾ ವಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.