
ಕೋಲಾರ, ಮೇ ೧೯ (ಹಿ.ಸ) :
ಆ್ಯಂಕರ್ : ಮೂಲದಲ್ಲೇ ವಿಂಗಡಣೆ ಮಾಡದಿದ್ದರೆ ಪೌರಕಾರ್ಮಿಕರು ಅಂತಹ ಕಸವನ್ನು ಸ್ವೀಕರಿಸಬಾರದು. ಈ ಕೆಲಸದಲ್ಲಿ ನಿರ್ಲಕ್ಷ್ಯ ತೋರುವ ಕಮ್ಯುನಿಟಿ ಮೊಬಿಲೈಸರ್ಗಳ ಈ ತಿಂಗಳ ಸಂಬಳವನ್ನು ತಕ್ಷಣವೇ ತಡೆಹಿಡಿಯುವುದಾಗಿ ಅವರಿಗೆ ಸ್ಪಷ್ಟ ಸಂದೇಶ ರವಾನಿಸಿ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಆದೇಶ ನೀಡಿದರು.
ರಾಜ್ಯದಲ್ಲಿ ಘನತ್ಯಾಜ್ಯ ವಿಲೇವಾರಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಹಾಗೂ ಮಾನ್ಯ ಸುಪ್ರೀಂ ಕೋರ್ಟ್ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ‘ಕೇಸ್ವಾನ್’ ಸಭಾಂಗಣದಲ್ಲಿ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇನ್ನು ಮುಂದೆ ಕಡ್ಡಾಯವಾಗಿ ನಾಲ್ಕು ಹಂತಗಳಲ್ಲಿ ಕಸ ವಿಂಗಡಣೆ ಮಾಡಬೇಕು. ಹಸಿಕಸ, ಒಣಕಸ, ಸ್ಯಾನಿಟರಿ ಕಸ ಮತ್ತು ವಿಶೇಷ ಕಾಳಜಿಯ ಕಸ ಎಂದು ಪ್ರತ್ಯೇಕಿಸಬೇಕು ಎಂದರು.
ಮನೆ ಮನೆಗಳಿಂದ ಸಂಗ್ರಹವಾಗುವ ಡೈಪರ್ ಹಾಗೂ ಸ್ಯಾನಿಟರಿ ಪ್ಯಾಡ್ಗಳ ವೈಜ್ಞಾನಿಕ ವಿಲೇವಾರಿ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು, ಸ್ಯಾನಿಟರಿ ಪ್ಯಾಡ್ಗಳು ಮತ್ತು ಡೈಪರ್ಗಳನ್ನು ಎಲ್ಲೆಂದರಲ್ಲಿ ರಸ್ತೆ ಬದಿಗಳಲ್ಲಿ ಎಸೆಯುತ್ತಿರುವುದು ಸರಿಯಲ್ಲ. ಮೊದಲು ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯನ್ನು ಆಧರಿಸಿ ಎಷ್ಟು ಸ್ಯಾನಿಟರಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂಬುದರ ನಿಖರ ಸರ್ವೇ ಮತ್ತು ಅಂದಾಜು ಮಾಡಿ. ಇದಕ್ಕೆ ಆರೋಗ್ಯ, ಸಮಾಜ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಜಂಟಿ ತಂಡವನ್ನು ರಚಿಸಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ನೆರವು ಪಡೆದುಕೊಳ್ಳಿ, ಎಂದು ನಿರ್ದೇಶಿಸಿದರು.
ಅಂಗಡಿ ಮುಂಗಟ್ಟುಗಳಿ0ದ ಕಸ ವಿಂಗಡಣೆ ಸಮರ್ಪಕವಾಗಿ ಆಗದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಮನೆಗಳಿಂದ ಶೇ. ೬೭ ರಷ್ಟು ಕಸ ವಿಂಗಡಣೆಯಾಗುತ್ತಿದ್ದರೆ, ವಾಣಿಜ್ಯ ಅಂಗಡಿಗಳಿAದ ಕೇವಲ ಶೇ. ೩೭ ರಷ್ಟು ಮಾತ್ರ ಕಸ ವಿಂಗಡಣೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವ್ಯಾಪಾರಸ್ಥರಿಗೆ ಜಾಗೃತಿ ಮೂಡಿಸಿ, ಕಮರ್ಶಿಯಲ್ ಕಸ ಸಂಗ್ರಹಣೆಗೆ ಪ್ರತ್ಯೇಕ ಮತ್ತು ವೈಜ್ಞಾನಿಕ ಕಾರ್ಯವಿಧಾನ ಸಿದ್ಧಪಡಿಸಿ, ಎಂದರು.
ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಸುರಿಯುವ 'ಬ್ಲಾಕ್ ಸ್ಪಾಟ್'ಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಅಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ಮಾತ್ರವಲ್ಲದೆ, ಆ ಜಾಗಗಳನ್ನು ಸ್ಥಳೀಯ ನಿವಾಸಿಗಳು ಅಥವಾ ಸಂಘ-ಸ0ಸ್ಥೆಗಳಿಗೆ ಹಸ್ತಾಂತರಿಸಿ ಮಾಡಿ ಅವರ ಮೇಲೆ ಜವಾಬ್ದಾರಿ ಹೊರಿಸಿ ಇಲ್ಲದಿದ್ದರೆ ಜನರು ಮತ್ತೆ ಅಲ್ಲಿಗೇ ಹೋಗಿ ಕಸ ಹಾಕುತ್ತಾರೆ ಎಂದು ಎಚ್ಚರಿಸಿದರು.
ಹಸಿರು ಪೀಠದ ನಿರ್ದೇಶನದಂತೆ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ತಮ್ಮ ಸ್ವಂತ ಸಂಪನ್ಮೂಲ ಮತ್ತು ಆಯವ್ಯಯದಲ್ಲಿ ಕಡ್ಡಾಯವಾಗಿ ಶೇ. ೩೦ ರಷ್ಟು ಹಣವನ್ನು ಕೇವಲ ಘನತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತಾ ಕಾರ್ಯಗಳಿಗಾಗಿಯೇ ಮೀಸಲಿಟ್ಟು ಬಳಸಲು ಸಪ್ಲಿಮೆಂಟರಿ ಬಜೆಟ್ ಮೂಲಕ ಅನುಮೋದನೆ ಪಡೆದುಕೊಳ್ಳಲು ಸೂಚಿಸಲಾಯಿತು. ಇದೇ ವೇಳೆ ಇ-ತ್ಯಾಜ್ಯ ವಿಲೇವಾರಿಗೆ ಜಾಗೃತಿ ಮೂಡಿಸಲು ಹಾಗೂ ವಾರ್ಡ್ಗಳಲ್ಲಿ 'ಆರ್.ಆರ್.ಆರ್' ಮಾಡಲ್ ಗಳನ್ನು ಸ್ಥಾಪಿಸಲು ನಿರ್ದೇಶಿಸಲಾಯಿತು.
ಕಸ ವಿಲೇವಾರಿಗೆ ಜಿಲ್ಲಾ ಮಟ್ಟದಲ್ಲಿ ಕಮಿಟಿಗಳನ್ನು ಸ್ಥಾಪಿಸಬೇಕು. ಪೌರಕಾರ್ಮಿಕರಿಗೆ ಕಸ ವಿಂಗಡಣೆ, ಕಸ ವಿಲೇವಾರಿ ಕುರಿತು ತರಬೇತಿ ನೀಡುವುದರ ಜೊತೆಗೆ ಸಾರ್ವಜನಿಕರಿಗೂ ಕಸ ವಿಲೇವಾರಿ ಮಾಡುವ ಕುರಿತು ಜಾಗೃತಿ ಕಾರ್ಯಕ್ರಮ ರೂಪಿಸಬೇಕೆಂದರು
ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತವಾಗುತ್ತಿರುವುದಕ್ಕೆ ಅಸಮಾಧಾನಗೊಂಡ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಕೇವಲ ಆಫೀಸ್ನಲ್ಲೇ ಕೂರಬಾರದು. ದಿನಾ ಕಚೇರಿಗೆ ಬರುವಾಗ ಮತ್ತು ಹೋಗುವಾಗ ಒಂದೇ ರಸ್ತೆಯಲ್ಲಿ ಓಡಾಡಬೇಡಿ; ದಿನಕ್ಕೊಂದು ಹೊಸ ರೂಟ್ನಲ್ಲಿ ಓಡಾಡಿ ಆಗ ಇಡೀ ನಗರದ ಸ್ವಚ್ಛತೆಯ ಪರಿಸ್ಥಿತಿ ನಿಮಗೆ ಕಣ್ಣಿಗೆ ಕಾಣುತ್ತದೆ. ಕಣ್ಣು ಮತ್ತು ಕಿವಿಗಳನ್ನು ತೆರೆದುಕೊಂಡು ನಗರ ಪ್ರದಕ್ಷಿಣೆ ಮಾಡಿ, ತಪ್ಪು ಕಂಡಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಿ, ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದೆ ಸಂದರ್ಭದಲ್ಲಿ ರಾಜ್ಯ ಮಟ್ಟದ ಸ್ವಚ್ಛತಾ ತಜ್ಞರ ಪಟ್ಟಿಯಲ್ಲಿ ೩ನೇ ಸ್ಥಾನ ಪಡೆದ ಹರ್ಷವರ್ಧನ್ ಅವರಿಗೆ ಹಾಗೂ ಜಿಲ್ಲೆಯ ನಾಗನೂರು ವೆಂಕಟೇಶ್, ಮಹಾದೇವ್ ಮಾಲೂರು ಮತ್ತು ಅಂಜನೇಯ ಸೇರಿದಂತೆ ಅತ್ಯುತ್ತಮ ಸಾಧನೆ ಮಾಡಿದ ಅಧಿಕಾರಿಗಳಿಗೆ ಜಿಲ್ಲಾಡಳಿತದ ಪರವಾಗಿ ಸಭೆಯಲ್ಲಿ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ ಬಾಗೇವಾಡಿ, ನಗರಸಭೆ ಪೌರಾಯುಕ್ತರಾದ ನವೀನ್ ಚಂದ್ರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಅಂಬಿಕಾ ಹಾಗೂ ಜಿಲ್ಲೆಯ ಎಲ್ಲಾ ನಗರಸಭೆ ಮತ್ತು ಪುರಸಭೆಗಳ ಪೌರಾಯುಕ್ತರು ಮತ್ತು ಮುಖ್ಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್