


ಬಳ್ಳಾರಿ, 19 ಮೇ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬರಿಗೈ ಸರ್ಕಾರ, ಖಾಲಿ ಕೈ ಸರ್ಕಾರ, ಶೂನ್ಯ ಸಾಧನೆಯ ಸರ್ಕಾರವಾಗಿದ್ದು ಮೂರು ವರ್ಷಗಳ ಸಾಧನೆಯ ಬದಲಾಗಿ ನೂರು ಸುಳ್ಳುಗಳ ಸರ್ಕಾರ ಸಾಧನೋತ್ಸವ ಆಚರಿಸಿಕೊಳ್ಳಲಿ ಎಂದು ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಅವರು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ನ ಕರ್ನಾಟಕ ಸರ್ಕಾರ ತುಮಕೂರಿನಲ್ಲಿ ಮೂರನೇ ವರ್ಷದ ಸಾಧನಾ ಸಮಾವೇಶವನ್ನು ಮಂಗಳವಾರ ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಸುದ್ದಿಗಾರರ ಜೊತೆಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ಈ ಸರ್ಕಾರದ ಸಾಧನೆ ಶೂನ್ಯವಾಗಿದೆ ಎಂದರು ಆರೋಪಿಸಿದರು.
ಕರ್ನಾಟಕದಲ್ಲಿ ಅಭಿವೃದ್ಧಿ ಸ್ಥಗಿತಗೊಂಡು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮರೆ ಮಾಚಲಿಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಸಾಧನಾ ಸಮಾವೇಶವನ್ನು ಆಚರಿಸಿಕೊಳ್ಳುತ್ತಿದೆ. ಆದರೆ, ಜನರು ಸರ್ಕಾರದ ವೈಫಲ್ಯಗಳನ್ನು, ಸಿದ್ದರಾಮಯ್ಯ ಅವರ ಆಡಳಿತದ ಭ್ರಮನಿರಸತ್ವವನ್ನು 2028ರ ಚುನಾವಣೆಯಲ್ಲಿ ಸಾಬೀತುಪಡಿಸಲು ಸಜ್ಜಾಗಿದ್ದಾರೆ. 2028ರ ವಿಧಾನಸಭಾ ಚುನಾವನೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಜಾತಿ ಜಾತಿಗಳ ಮಧ್ಯೆ ಒಡಕು ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ಎಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸುವ ಬದಲಾಗಿ `ಹಿಜಾಬ್' ಧರಿಸಲು ಅವಕಾಶ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಅಧಿಕಾರದ ಕಚ್ಚಾಟದಲ್ಲಿ ನಾಲ್ಕು ಕಾಲುಗಳ ಕುರ್ಚಿಯ ಒಂದು ಕಾಲನ್ನು ಡಿಕೆಶಿ ಕಿತ್ತುಕೊಂಡಂತೆ ಆಡಳಿತ ನಡೆಯುತ್ತಿದೆ. ಖಾಲಿ ಡಬ್ಬ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಸಮಾಜದಲ್ಲಿರುವ ಒಂದು ಜಾತಿಯ ತುಷ್ಠೀಕರಣದಲ್ಲಿ ಸರ್ಕಾರ ನಿರತವಾಗಿದೆ. ಒಳ ಮೀಸಲಾತಿ ಕುರಿತು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದರೂ ಸರ್ಕಾರ ಒಳ ಮೀಸಲಾತಿಯನ್ನು ಪ್ರಕಟ ಮಾಡಿದೆ. ಒಳ ಮೀಸಲಾತಿಯಲ್ಲಿ ಎಸ್ಸಿ - ಎಸ್ಟಿ ಸಮುದಾಯಕ್ಕೆ ದೊಡ್ಡದಾದ ಮೋಸವಾಗಿದೆ. ಒಳ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ದಲಿತರಿಗೆ ಮೋಸ ಮಾಡಿದೆ. ಮುಡಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ವಕೀಲರು ವಾದ ಮಂಡಿಸಲು ಬೆಂಗಳೂರಿಗೆ ಬಂದಿರುವಾಗ, ಒಳ ಮೀಸಲಾತಿ ಪ್ರಕರಣದಲ್ಲಿ ವಾದ ಮಂಡಿಸಲು ಸರ್ಕಾರ ಸುಪ್ರೀಂಕೋರ್ಟ್ನ ವಕೀಲರನ್ನು ನೇಮಿಸಲಿಲ್ಲ ಏಕೆ? ಎಂದು ಪ್ರಶ್ನಿಸಿದರು.
ಮೀಸಲಾತಿ ವಿಚಾರವನ್ನು ಸಂವಿಧಾನದ 9ನೇ ಶೆಡ್ಯೂಲ್ನಲ್ಲಿ ಸೇರಿಸಲು ನ್ಯಾಯಾಂಗದ ತೊಡಕಿದೆ. ಈ ಸಮಸ್ಯೆ ಪರಿಹಾರ ಆಗುವವರೆಗೂ ಮೀಸಲಾತಿ ಕುರಿತಾದ ವಿಷಯವನ್ನು 9ನೇ ಶೆಡ್ಯೂಲ್ನಲ್ಲಿ ಸೇರಿಸಲು ಸಾಧ್ಯವಿಲ್ಲ. ಈ ವಿಚಾರವನ್ನು ತಿಳಿದಿರುವ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಜನರನ್ನು ದಿಕ್ಕುತಪ್ಪಿಸಲು ಅನಗತ್ಯವಾಗಿ ವಾದ ಮಂಡಿಸುತ್ತಿದ್ದಾರೆ ಎಂದು ಟೀಕಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಅನಿಲ್ ನಾಯ್ಡು, ಮುಖಂಡರಾದ ಹೆಚ್. ಹನುಮಂತಪ್ಪ, ಎಸ್. ಗುರುಲಿಂಗನಗೌಡ, ವೀರಶೇಖರರೆಡ್ಡಿ, ಕಾರ್ಪೊರೇಟರುಗಳಾದ ಶ್ರೀನಿವಾಸ ಮೋತ್ಕರ್, ಹನುಮಂತು ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್