
ಗದಗ, 19 ಮೇ (ಹಿ.ಸ.) :
ಆ್ಯಂಕರ್ : ತೀವ್ರಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಲಕ್ಷೇಶ್ವರ ಪಟ್ಟಣದಲ್ಲಿ ಪೌರ ಕಾರ್ಮಿಕರ ಕೊರತೆಯಿಂದ ಸ್ವಚ್ಛತಾ ಸಮಸ್ಯೆ ಹೆಚ್ಚಾಗಿದ್ದು, ಸ್ವಚ್ಛ ಹಾಗೂ ಸುಂದರ ಪಟ್ಟಣ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಪುರಸಭೆಯ 15ನೇ ಹಣಕಾಸು ಯೋಜನೆಯಡಿ ಕಸ ವಿಲೇವಾರಿಗೆ ಖರೀದಿಸಲಾದ ಹೊಸ ಲೈಲ್ಯಾಂಡ್ ವಾಹನ ಹಾಗೂ ಎರಡು ಟ್ರ್ಯಾಕ್ಟರ್ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಸ್ವಚ್ಛತೆಯ ಕೊರತೆಯಿಂದ ಚರಂಡಿಗಳು ತ್ಯಾಜ್ಯದಿಂದ ತುಂಬಿಕೊಂಡಿದ್ದು, ರಸ್ತೆ ಬದಿಗಳಲ್ಲಿ ಕಸದ ರಾಶಿಗಳು ಕಾಣಿಸುತ್ತಿವೆ. ಈಗಾಗಲೇ ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಪ್ರತಿ ಶನಿವಾರ ಅಥವಾ ಭಾನುವಾರ ತಾವೂ ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ ಶಾಸಕ ಲಮಾಣಿ, ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸಿದರೆ ಮಾತ್ರ ಸ್ವಚ್ಛ ಹಾಗೂ ಸುಂದರ ಪಟ್ಟಣ ನಿರ್ಮಾಣ ಸಾಧ್ಯ ಎಂದು ಕರೆ ನೀಡಿದರು.
ಪುರಸಭೆಯ ಅಧಿಕಾರಿಗಳು ಕೆಟ್ಟು ನಿಂತಿರುವ ಕಸ ಸಂಗ್ರಹ ವಾಹನಗಳನ್ನು ತ್ವರಿತವಾಗಿ ದುರಸ್ತಿ ಮಾಡಿಸಿ, ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸೂಚಿಸಿದರು.
“ಲಕ್ಷೇಶ್ವರವನ್ನು ಜಿಲ್ಲೆಯಲ್ಲೇ ಮಾದರಿ ಸ್ವಚ್ಛ ಪಟ್ಟಣವನ್ನಾಗಿಸುವ ಗುರಿ ನಮ್ಮದು” ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪುರಸಭೆಯಿಂದ ನಿರ್ವಹಣೆ ಮಾಡಲಾಗುತ್ತಿರುವ ಶವಾಗಾರ ಹಳೆಯದಾಗಿರುವ ಹಿನ್ನೆಲೆಯಲ್ಲಿ ಮುಂದಿನ 8 ರಿಂದ 10 ದಿನಗಳೊಳಗೆ ಹೊಸ ಶವಾಗಾರವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಬಳಿಕ ಶಾಸಕ ಡಾ. ಚಂದ್ರು ಲಮಾಣಿ ಅವರು ಸೋಮೇಶ್ವರ ನಗರ ವಾರ್ಡ್ನಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಪೌರ ಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ಗುಡಾದರಿ, ಸುನೀಲ ಮಹಾಂತಶೆಟ್ಟರ, ವಿಜಯ ಹತ್ತಿಕಾಳ, ಎಂ.ಆರ್. ಪಾಟೀಲ, ಗಂಗಾಧರ ಮೆಣಸಿನಕಾಯಿ, ಅನಿಲ ಮುಳಗುಂದ, ಮಂಜುನಾಥ ಹೊಗೆಸೊಪ್ಪಿನ, ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಇಂಜಿನಿಯರ್ ಈರಣ್ಣ ದುರಗಣ್ಣವರ, ಗಿರೀಶ ಚೌರಡ್ಡಿ, ರುದ್ರಪ್ಪ ಉಮಚಗಿ, ರಾಮು ನಾಯಕ, ವೀರೇಶ ಸಾಸಲವಾಡ, ಮಂಜುನಾಥ ಗದಗ, ಸಾಗರ ಪಾಟೀಲ, ಶಿವಾನಂದ ಉಪಚಗಿ, ರಮೇಶ ಹಾಳದೋಟದ, ಮಂಜುನಾಥ ಗಜಾಕೋಶ, ಪ್ರವೀಣ ಮುದ, ಮುತ್ತಣ್ಣ ದೊಡ್ಡಮನಿ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP