
ಗದಗ, 19 ಮೇ (ಹಿ.ಸ.) :
ಆ್ಯಂಕರ್ : ಗದಗ ನಗರದಲ್ಲಿ ಸುರಿದ ಭಾರಿ ಗಾಳಿ ಹಾಗೂ ಮಳೆಯ ಅವಾಂತರದಿಂದ ಗಂಗಿಮಡಿ ಪ್ರದೇಶದ ಬಡ ಕುಟುಂಬಗಳ ಬದುಕು ಅಸ್ತವ್ಯಸ್ತಗೊಂಡಿದ್ದು, 50ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಂದಿರುವ ಘಟನೆ ನಡೆದಿದೆ. ನಿನ್ನೆ ಸಂಜೆ ಸುರಿದ ಭಾರಿ ಗಾಳಿ ಹಾಗೂ ಮಳೆಗೆ ಹಲವು ತಗಡಿನ ಶೆಡ್ ಗಳು ಹಾರಿ ಹೋಗಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮನೆ ಕಳೆದುಕೊಂಡ ಕುಟುಂಬಗಳು ತಾತ್ಕಾಲಿಕ ಆಶ್ರಯಕ್ಕಾಗಿ ಪರದಾಡುತ್ತಿದ್ದು, ಮಹಿಳೆಯರು, ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಮ್ಮ ಪರಿಸ್ಥಿತಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ಗಂಗಿಮಡಿ ನಿವಾಸಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ಮಾಹಿತಿ ತಿಳಿದ ತಕ್ಷಣ ಗದಗ ತಹಶಿಲ್ದಾರ ಹಾಗೂ ನಗರಸಭೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.
ಸಂಕಷ್ಟದಲ್ಲಿರುವ ಕುಟುಂಬಗಳಿಗಾಗಿ ಗಂಗಿಮಡಿ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಯಿತು. ಆದರೆ, ಕೇವಲ ತಾತ್ಕಾಲಿಕ ವ್ಯವಸ್ಥೆ ಬೇಡ, ನಮಗೆ ಶಾಶ್ವತ ಮನೆಗಳ ವ್ಯವಸ್ಥೆ ಮಾಡಿಕೊಡಬೇಕು ಎಂದು ನಿವಾಸಿಗಳು ಪಟ್ಟು ಹಿಡಿದರು.
“ನಮಗೆ ಮನೆ ನೀಡುವವರೆಗೆ ಶಾಲೆಯಲ್ಲೇ ವಾಸ್ತವ್ಯ ಹೂಡುತ್ತೇವೆ. ಶಾಲೆ ಆರಂಭವಾದರೂ ನಾವು ಇಲ್ಲಿಂದ ತೆರಳುವುದಿಲ್ಲ” ಎಂದು ಬಡ ಜನರು ಅಧಿಕಾರಿಗಳ ಎದುರು ತಮ್ಮ ಅಸಮಾಧಾನ ಹೊರಹಾಕಿದರು.
ಇದೇ ವೇಳೆ, ಸ್ಥಳೀಯ ಜನರು ಸಚಿವ ಎಚ್.ಕೆ. ಪಾಟೀಲ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದು, ವರ್ಷಗಳಿಂದ ವಾಸದ ಸಮಸ್ಯೆ ಎದುರಿಸುತ್ತಿದ್ದರೂ ಶಾಶ್ವತ ಪರಿಹಾರ ದೊರಕಿಲ್ಲ ಎಂದು ಆರೋಪಿಸಿದರು.
ಗಾಳಿ–ಮಳೆಯ ಹೊಡೆತದಿಂದ ಬದುಕಿನ ನೆಲೆ ಕಳೆದುಕೊಂಡಿರುವ ಕುಟುಂಬಗಳಿಗೆ ಸರ್ಕಾರ ತುರ್ತು ನೆರವು ನೀಡುವುದರ ಜೊತೆಗೆ ಶಾಶ್ವತ ವಸತಿ ಕಲ್ಪಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಹಿಂದೂಸ್ತಾನ್ ಸಮಾಚಾರ್ / lalita MP