
ಗದಗ, 19 ಮೇ (ಹಿ.ಸ.) :
ಆ್ಯಂಕರ್ : ಯುವಕರು ದೈಹಿಕ, ಮಾನಸಿಕ, ನೈತಿಕ ಹಾಗೂ ಆಧ್ಯಾತ್ಮಿಕ ಸದೃಢತೆಯನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾತ್ರವಹಿಸಬೇಕು ಎಂದು ಹುಲಕೋಟಿಯ ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸ್ವಾಮಿ ಶಿವಪ್ರಿಯಾನಂದಜಿ ಮಹಾರಾಜ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆದರ್ಶ ಶಿಕ್ಷಣ ಸಮಿತಿ ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಯುವ ಸಾಹಿತ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಓದು, ವ್ಯಾಯಾಮ, ಚಿಂತನೆ ಹಾಗೂ ಚರ್ಚೆಗಳ ಮೂಲಕ ಯುವಕರು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸಾಹಿತ್ಯವು ವ್ಯಕ್ತಿಯನ್ನು ಪರಿಪೂರ್ಣತೆಯೆಡೆಗೆ ಕೊಂಡೊಯ್ಯುವ ಪ್ರಬಲ ಮಾಧ್ಯಮವಾಗಿದ್ದು, ಬದುಕಿನ ವಿವಿಧ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮನೋಭಾವ ಯುವಜನರಲ್ಲಿ ಬೆಳೆಯಬೇಕು ಎಂದು ಹೇಳಿದರು.
“ಯುವಕರ ಕೈಯಲ್ಲಿ ಪುಸ್ತಕ ಇದ್ದರೆ ಮಾತ್ರ ಸಮಾಜದ ಭವಿಷ್ಯ ಸುರಕ್ಷಿತವಾಗಿರುತ್ತದೆ” ಎಂದು ಸ್ವಾಮಿ ಶಿವಪ್ರಿಯಾನಂದಜಿ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಯುವಕರು ತಮ್ಮ ಶಕ್ತಿ ಹಾಗೂ ಸಾಮರ್ಥ್ಯವನ್ನು ಅನಪೇಕ್ಷಿತ ಚಟುವಟಿಕೆಗಳಲ್ಲಿ ವ್ಯಯಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಅತಿಯಾದ ಅಂತರ್ಜಾಲ ಬಳಕೆ, ಕೃಷಿಯ ಬಗ್ಗೆ ಅನಾಸಕ್ತಿ ಹಾಗೂ ಓದುವ ಸಂಸ್ಕೃತಿಯಿಂದ ದೂರವಾಗುತ್ತಿರುವುದು ಇಂದಿನ ಯುವ ಸಮುದಾಯದ ಪ್ರಮುಖ ಸಮಸ್ಯೆಗಳಾಗಿವೆ. ಯುವಕರಲ್ಲಿ ಚಿಂತನ–ಮಂಥನ ಮೂಡಿಸುವ ಉದ್ದೇಶದಿಂದಲೇ ಈ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆದರ್ಶ ಶಿಕ್ಷಣ ಸಮಿತಿಯ ಅಧ್ಯಕ್ಷ ಆನಂದ ಪೋತ್ನಿಸ್ ಮಾತನಾಡಿ, ಪಠ್ಯದ ಜೊತೆಗೆ ಪ್ರಚಲಿತ ವಿದ್ಯಮಾನಗಳ ಕುರಿತ ಗಂಭೀರ ಚಿಂತನೆ ಯುವಕರಲ್ಲಿ ಬೆಳೆಬೇಕು. ಕಾರ್ಯೋನ್ಮುಖ ಯುವಜನತೆ ಸಮಾಜದ ಶಕ್ತಿಯಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಪ್ರಾಚಾರ್ಯ ಡಾ. ವಿ.ಟಿ. ನಾಯ್ಕರ, ಜಾನಪದ ಅಕಾಡೆಮಿ ಸದಸ್ಯ ಶಂಕರಣ್ಣ ಸಂಕಣ್ಣವರ, ಹನಮಂತಗೌಡ ಕಲ್ಮನಿ ಉಪಸ್ಥಿತರಿದ್ದರು.
ಬಾಹುಬಲಿ ಜೈನರ್ ಸ್ವಾಗತಿಸಿದರು. ಈಶ್ವರ ಮೆಲ್ಲೇರಿ ಕಾರ್ಯಕ್ರಮ ನಿರೂಪಿಸಿದರು. ಭಾಗ್ಯಶ್ರೀ ಹುರಕಡ್ಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಅಂದಾನಪ್ಪ ವಿಭೂತಿ, ಚಂದ್ರಶೇಖರ ವಸ್ತ್ರದ, ಕೆ.ಎಚ್. ಬೇಲೂರ, ಎ.ಎಸ್. ಮಕಾನದಾರ, ಅನ್ನದಾನಿ ಹಿರೇಮಠ, ಅಂದಾನಯ್ಯ ಅರವಟಗಿಮಠ, ಶ್ವೇತಾ ಕೊಟಗಿ, ಎಸ್.ಎಂ. ಕಾತರಕಿ, ಸತೀಶ ಚನ್ನಪ್ಪಗೌಡರ ಸೇರಿದಂತೆ ಹಲವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP