
ಹನೋಯಿ, 19 ಮೇ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ವಿಯೆಟ್ನಾಂ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಗಾಢಗೊಳಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ವಿಯೆಟ್ನಾಂ ರಕ್ಷಣಾ ಸಚಿವ ಜನರಲ್ ಫಾನ್ ವ್ಯಾನ್ ಗಿಯಾಂಗ್ ಅವರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫಲಪ್ರದ ದ್ವಿಪಕ್ಷೀಯ ಸಭೆ ನಡೆಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಬೆಳವಣಿಗೆಗಳ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಭೆಯಲ್ಲಿ ಬೆಳೆಯುತ್ತಿರುವ ಭಾರತ–ವಿಯೆಟ್ನಾಂ ವರ್ಧಿತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಮಗ್ರವಾಗಿ ಪರಿಶೀಲಿಸಲಾಯಿತು. ಕಡಲ ಭದ್ರತೆ, ರಕ್ಷಣಾ ಉದ್ಯಮ ಸಹಕಾರ, ತರಬೇತಿ ವಿನಿಮಯ ಹಾಗೂ ಪ್ರಾದೇಶಿಕ ಸ್ಥಿರತೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ವಿವರವಾದ ಚರ್ಚೆ ನಡೆಯಿತು.
ಈ ವೇಳೆ, ವಿಯೆಟ್ನಾಂ ವಾಯುಪಡೆ ಅಧಿಕಾರಿಗಳ ಕಾಲೇಜಿನಲ್ಲಿ ಸ್ಥಾಪಿಸಲಾದ ಭಾಷಾ ಪ್ರಯೋಗಾಲಯವನ್ನು ಉಭಯ ದೇಶಗಳ ಪ್ರತಿನಿಧಿಗಳು ಜಂಟಿಯಾಗಿ ಉದ್ಘಾಟಿಸಿದರು. ಇದು ರಕ್ಷಣಾ ತರಬೇತಿ ಹಾಗೂ ತಾಂತ್ರಿಕ ಸಾಮರ್ಥ್ಯ ವೃದ್ಧಿಗೆ ಹೊಸ ಉತ್ತೇಜನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಇದೇ ಸಂದರ್ಭದಲ್ಲಿ, ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸಲು ಉಭಯ ದೇಶಗಳ ನಡುವೆ ಒಪ್ಪಂದ ವಿನಿಮಯಗೊಂಡಿದ್ದು, ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಮಹತ್ವದ ಮೈಲುಗಲ್ಲು ಎಂದು ಪರಿಗಣಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.