
ದಾವಣಗೆರೆ, 19 ಮೇ (ಹಿ.ಸ.) :
ಆ್ಯಂಕರ್ : ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಘಾಟನೆಯನ್ನು ಸಂಸದೆ ಪ್ರಭಾ ಮಲ್ಲಿಕಾರ್ಜುನ ನೆರವೇರಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ಸ್ಥಳೀಯ ಮಟ್ಟದಲ್ಲೇ ಒದಗಿಸುವ ಮಹತ್ವದ ಉದ್ದೇಶದೊಂದಿಗೆ ಕಾಲೇಜು ಆರಂಭವಾಗಿದ್ದು, ಇದು ನ್ಯಾಮತಿ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂದು ಅವರು ಹೇಳಿದರು.
ಉನ್ನತ ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ತೆರಳಬೇಕಾಗಿರುವ ಪರಿಸ್ಥಿತಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕಾಲೇಜು ಸಹಕಾರಿಯಾಗಲಿದೆ. ಶಿಕ್ಷಣದ ಮೂಲಕ ಯುವಜನತೆಗೆ ಉತ್ತಮ ಭವಿಷ್ಯ ನಿರ್ಮಾಣವಾಗಬೇಕು ಎಂಬ ಆಶಯದೊಂದಿಗೆ ಕಾಲೇಜಿನ ಮೂಲಸೌಕರ್ಯ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಸಂಸದೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು, ಕಾಲೇಜು ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.