ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಭುವನ್ ಚಂದ್ರ ಖಂಡೂರಿ ನಿಧನ
ಖಂಡೂರಿ


ಡೆಹ್ರಾಡೂನ್, 19 ಮೇ (ಹಿ.ಸ.) :

ಆ್ಯಂಕರ್ : ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ವಯೋಸಹಜ ಅನಾರೋಗ್ಯದ ಕಾರಣದಿಂದ ಕಳೆದ ಹದಿನೈದು ದಿನಗಳಿಂದ ಡೆಹ್ರಾಡೂನ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಪೂರ್ವಾಹ್ನ ಸುಮಾರು 11.15ರ ವೇಳೆಗೆ ಅವರು ಕೊನೆಯುಸಿರೆಳೆದರು.

ಖಂಡೂರಿ ಅವರ ಪುತ್ರಿ ಋತು ಖಂಡೂರಿ ಭೂಷಣ ಉತ್ತರಾಖಂಡ ವಿಧಾನಸಭೆಯ ಅಧ್ಯಕ್ಷೆಯಾಗಿದ್ದು, ಪುತ್ರ ಮನೀಶ್ ಖಂಡೂರಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಭಾರತೀಯ ಸೇನೆಯಲ್ಲಿ ಮೇಜರ್ ಜನರಲ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದ ಭುವನ್ ಚಂದ್ರ ಖಂಡೂರಿ ಅವರು ನಿವೃತ್ತಿಯ ನಂತರ ರಾಜಕೀಯ ಪ್ರವೇಶಿಸಿದ್ದರು. ಸರಳತೆ, ಪ್ರಾಮಾಣಿಕತೆ ಮತ್ತು ಕಟ್ಟುನಿಟ್ಟಿನ ಆಡಳಿತಕ್ಕಾಗಿ ಅವರು ದೇಶದಾದ್ಯಂತ ಹೆಸರು ಪಡೆದಿದ್ದರು. ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ ಅವರು ರಾಜ್ಯದ ಅಭಿವೃದ್ಧಿಗೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ದೇಶದ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಮಹತ್ವದ್ದೆಂದು ಪರಿಗಣಿಸಲಾಗಿದೆ.

ಖಂಡೂರಿ ಅವರ ನಿಧನಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಶೋಕ ಸಂದೇಶದಲ್ಲಿ, “ಭುವನ್ ಚಂದ್ರ ಖಂಡೂರಿ ಅವರು ರಾಷ್ಟ್ರಸೇವೆ, ಶಿಸ್ತು ಮತ್ತು ನಿಸ್ವಾರ್ಥ ಜನಸೇವೆಯ ಪ್ರತೀಕವಾಗಿದ್ದರು. ಸಾರ್ವಜನಿಕ ಜೀವನದಲ್ಲಿ ಅವರು ಸದಾ ಪಾರದರ್ಶಕತೆ ಮತ್ತು ಸುಶಾಸನಕ್ಕೆ ಆದ್ಯತೆ ನೀಡಿದರು” ಎಂದು ತಿಳಿಸಿದ್ದಾರೆ.

“ಉತ್ತರಾಖಂಡದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಎಂದೆಂದಿಗೂ ಸ್ಮರಣೀಯವಾಗಿರಲಿದೆ. ಅವರ ನಿಧನವು ರಾಜ್ಯಕ್ಕೂ ರಾಷ್ಟ್ರ ರಾಜಕೀಯಕ್ಕೂ ಅಪೂರಣೀಯ ನಷ್ಟ” ಎಂದು ಧಾಮಿ ಹೇಳಿದ್ದಾರೆ.

ಭುವನ್ ಚಂದ್ರ ಖಂಡೂರಿ ಅವರು 1954ರಿಂದ 1990ರವರೆಗೆ ಭಾರತೀಯ ಸೇನೆಯ ಇಂಜಿನಿಯರ್ ದಳದಲ್ಲಿ ಸೇವೆ ಸಲ್ಲಿಸಿದ್ದರು. ವಿಶಿಷ್ಟ ಸೇವೆಗಾಗಿ ಅವರಿಗೆ 1982ರಲ್ಲಿ ‘ಅತಿ ವಿಶಿಷ್ಟ ಸೇವಾ ಪದಕ’ ನೀಡಿ ಗೌರವಿಸಲಾಗಿತ್ತು. ನಂತರ ರಾಜಕೀಯ ಪ್ರವೇಶಿಸಿ ಗಢ್ವಾಲ್ ಲೋಕಸಭಾ ಕ್ಷೇತ್ರದಿಂದ ಹಲವು ಬಾರಿ ಸಂಸದರಾಗಿದ್ದರು.

ಖಂಡೂರಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಉತ್ತರಾಖಂಡದಾದ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದೆ. ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸಾಮಾಜಿಕ ಸಂಘಟನೆಗಳು ಹಾಗೂ ಸಾರ್ವಜನಿಕರು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande