
ಚಿತ್ರದುರ್ಗ, 19 ಮೇ (ಹಿ.ಸ.) :
ಆ್ಯಂಕರ್ : ಚಿತ್ರದುರ್ಗ ಬುದ್ಧ ನಗರದಲ್ಲಿರುವ ನಗರ ಆರೋಗ್ಯ ಕೇಂದ್ರದ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಲಸಿಕಾ ಸತ್ರಕ್ಕೆ ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಯಂದಿರು ಹಾಗೂ ವಿವೇಕಾನಂದ ಕಾಲೇಜಿನ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್ ಮಾತನಾಡಿ, ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ 12 ಮಾರಕ ರೋಗಗಳ ವಿರುದ್ಧ ಮಕ್ಕಳಿಗೆ ಲಸಿಕೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ನಿಯಮಿತ ಲಸಿಕಾ ವೇಳಾಪಟ್ಟಿಯನ್ನು ಅನುಸರಿಸುವುದರಿಂದ ಮಕ್ಕಳನ್ನು ಪ್ರಾಣಾಪಾಯ ಹಾಗೂ ಗಂಭೀರ ಕಾಯಿಲೆಗಳಿಂದ ರಕ್ಷಿಸಬಹುದು ಎಂದು ವಿವರಿಸಿ, ಲಸಿಕಾ ವೇಳಾಪಟ್ಟಿಯ ಸಮಗ್ರ ಮಾಹಿತಿಯನ್ನು ನೀಡಿದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೋವಿಂದರಡ್ಡಿ ಕೊಣ್ಣೂರ ಮಾತನಾಡಿ, ಆಸ್ಪತ್ರೆ ಹೆರಿಗೆಯ ಸುರಕ್ಷತೆ, ಮಗುವಿಗೆ ತಾಯಿಹಾಲುಣಿಸುವ ಮಹತ್ವ ಹಾಗೂ ಮುಂದಿನ ಮಗುವಿಗೆ ಸೂಕ್ತ ಕಾಲಾವಕಾಶದ ಅಗತ್ಯತೆ ಕುರಿತು ಮಾಹಿತಿ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ ಹೆಣ್ಣುಮಕ್ಕಳಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ‘ಎಚ್ಪಿವಿ’ ಲಸಿಕೆಯ ಮಹತ್ವ, ಅದರ ಪ್ರಯೋಜನಗಳು ಹಾಗೂ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯ ಕುರಿತು ಸಮಗ್ರವಾಗಿ ತಿಳಿಸಿದರು.
ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ನಾಗರತ್ನ ಲಸಿಕೆ ಹಾಕಿಸಿಕೊಂಡ ನಂತರ ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದಾದ ಅಡ್ಡ ಪರಿಣಾಮಗಳು ಹಾಗೂ ಅವುಗಳನ್ನು ನಿರ್ವಹಿಸುವ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.