
ಗದಗ, 19 ಮೇ (ಹಿ.ಸ.) :
ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಧನಸಹಾಯದಲ್ಲಿ ಆಯೋಜಿಸಲಾದ ಕಲಾವಿದ ನವೀನ್ ಪತ್ತಾರ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ನಗರದ ವಿಜಯ ಕಲಾಮಂದಿರ ಸಂಸ್ಥೆಯ ಕಲಾಮಹರ್ಷಿ ಟಿ.ಪಿ. ಅಕ್ಕಿ ಆರ್ಟ್ ಗ್ಯಾಲರಿಯಲ್ಲಿ ಚಾಲನೆ ದೊರೆಯಿತು.
ಕಾರ್ಯಕ್ರಮವನ್ನು ವೀರೇಶ್ವರ ಪುಣ್ಯಾಶ್ರಮದ ಸಂಗೀತ ಕಲಾವಿದ ಶ್ರೀ ಗುರುಪಂಚಾಕ್ಷರಿ ಗುರುವರ್ಯರು ಉದ್ಘಾಟಿಸಿ ಮಾತನಾಡಿ, ಕಲಾವಿದರು ತಮ್ಮ ಸೃಜನಾತ್ಮಕ ಕೃತಿ ರಚನೆಗಳ ಮೂಲಕ ಕಲಾಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಹಾರೈಸಿದರು. ಕಲೆಯು ಸಮಾಜದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವ ಶಕ್ತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಕೃಷ್ಣ ಕೆ.ಎಂ. ಮಾತನಾಡಿ, ಕಲಾವಿದ ನವೀನ್ ಪತ್ತಾರ ಅವರು ಶಿಲ್ಪಕಲೆಯ ಅಂಶಗಳನ್ನು ಬಳಸಿ ವಿನೂತನ ಹಾಗೂ ಸೃಜನಶೀಲ ಕಲಾಕೃತಿಗಳನ್ನು ರೂಪಿಸಿರುವುದು ಗಮನಾರ್ಹವಾಗಿದೆ ಎಂದು ಹೇಳಿದರು.
ಅವರ ಕಲಾಕೃತಿಗಳಲ್ಲಿನ ಬಣ್ಣಗಳ ಸಂಯೋಜನೆ, ವಿನ್ಯಾಸ ಹಾಗೂ ಕಲಾತ್ಮಕ ಅಭಿವ್ಯಕ್ತಿ ಕಲಾಪ್ರೇಮಿಗಳ ಗಮನ ಸೆಳೆಯುತ್ತಿದ್ದು, ಕಲಾವಿದನ ಸೃಜನಶೀಲತೆ ಸಮಾಜದ ಸಾಂಸ್ಕೃತಿಕ ಅರಿವನ್ನು ಮತ್ತಷ್ಟು ಸಮೃದ್ಧಗೊಳಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನವೀನ್ ಪತ್ತಾರ ಅವರ ಕಲಾಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ವಿದ್ಯಾರ್ಥಿಗಳು ಕೇವಲ ಚಿತ್ರಕೃತಿ ರಚನೆಗೆ ಸೀಮಿತವಾಗದೆ, ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಬೆಳವಣಿಗೆಗಳು ಹಾಗೂ ಬದಲಾವಣೆಗಳ ಬಗ್ಗೆ ಅರಿವು ಬೆಳೆಸಿಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು.
ಪ್ರಾರಂಭದಲ್ಲಿ ಕಲಾವಿದ ನವೀನ್ ಪತ್ತಾರ ತಮ್ಮ ಕಲಾಜೀವನದ ಅನುಭವಗಳು, ಕಲಾ ಪಯಣ ಹಾಗೂ ಪ್ರದರ್ಶನದಲ್ಲಿರುವ ಕಲಾಕೃತಿಗಳ ವೈಶಿಷ್ಟ್ಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಉಪನ್ಯಾಸಕ ಶರಣಪ್ಪ ಬಿ.ಹೆಚ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP