ಹೆಮ್ಮರ ಬಿದ್ದು ಬಡ ಕುಟುಂಬದ ಮನೆ ಜಖಂ
ಗದಗ, 19 ಮೇ (ಹಿ.ಸ.) : ಆ್ಯಂಕರ್ : ಭಾರಿ ಗಾಳಿ–ಮಳೆಯ ಅಬ್ಬರಕ್ಕೆ ಶತಮಾನಗಳ ಸೌಹಾರ್ದತೆಯ ಸಂಕೇತವಾಗಿದ್ದ ಆಲ–ಬೇವಿನ ಜಂಟಿ ಹೆಮ್ಮರ ಧರೆಗುರುಳಿ, ಬಡ ಮುಸ್ಲಿಂ ಕುಟುಂಬದ ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡ ಘಟನೆ ಗದಗ ನಗರದಲ್ಲಿ ನಡೆದಿದೆ. ನಗರದ ಐತಿಹಾಸಿಕ ಶ್ರೀ ವೀರನಾರಾಯಣ ದೇವಸ್ಥಾನ
ಫೋಟೋ


ಗದಗ, 19 ಮೇ (ಹಿ.ಸ.) :

ಆ್ಯಂಕರ್ : ಭಾರಿ ಗಾಳಿ–ಮಳೆಯ ಅಬ್ಬರಕ್ಕೆ ಶತಮಾನಗಳ ಸೌಹಾರ್ದತೆಯ ಸಂಕೇತವಾಗಿದ್ದ ಆಲ–ಬೇವಿನ ಜಂಟಿ ಹೆಮ್ಮರ ಧರೆಗುರುಳಿ, ಬಡ ಮುಸ್ಲಿಂ ಕುಟುಂಬದ ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡ ಘಟನೆ ಗದಗ ನಗರದಲ್ಲಿ ನಡೆದಿದೆ.

ನಗರದ ಐತಿಹಾಸಿಕ ಶ್ರೀ ವೀರನಾರಾಯಣ ದೇವಸ್ಥಾನದ ಹಿಂಭಾಗದ ಖಾನತೋಟ ರಸ್ತೆಯ ಮಧ್ಯದಲ್ಲಿದ್ದ ನೂರು ವರ್ಷಕ್ಕೂ ಹೆಚ್ಚು ಹಳೆಯದಾದ ಬೃಹತ್ ಮರವು ಗಾಳಿ–ಮಳೆಯ ತೀವ್ರತೆಗೆ ನೆಲಕ್ಕುರುಳಿದ್ದು, ಸ್ಥಳೀಯ ನಿವಾಸಿ ನಾಸೀರುದ್ದಿನ್ ಮುಲ್ಲಾ ಅವರ ಮನೆಯ ಮೇಲೆ ಬಿದ್ದಿದೆ. ಪರಿಣಾಮ ಮನೆಯು ಸಂಪೂರ್ಣ ಹಾನಿಗೊಳಗಾಗಿದ್ದು, ಅಕ್ಕಪಕ್ಕದ ನಾಲ್ಕೈದು ಮನೆಗಳಿಗೂ ಸಣ್ಣಪುಟ್ಟ ಹಾನಿಯಾಗಿದೆ.

ಈ ಘಟನೆಗೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಬಡ ಕುಟುಂಬಕ್ಕೆ ತಕ್ಷಣವೇ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವಂತೆ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ವಿಶೇಷವೆಂದರೆ, ಮುಸ್ಲಿಂ ಸಮುದಾಯಕ್ಕೆ ಸೇರಿದ ನಾಸೀರುದ್ದಿನ್ ಮುಲ್ಲಾ ಅವರು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ಆಲ–ಬೇವಿನ ಜಂಟಿ ಮರವನ್ನು ಹಲವು ವರ್ಷಗಳಿಂದ ತಮ್ಮ ಸ್ವಂತ ಮಗುವಿನಂತೆ ಪೋಷಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಕೋಮು ಸೌಹಾರ್ದತೆ ಹಾಗೂ ಪ್ರಕೃತಿ ಪ್ರೇಮಕ್ಕೆ ಸಂಕೇತವಾಗಿದ್ದ ಅದೇ ಹೆಮ್ಮರ ಇಂದು ಅವರ ಮನೆಯನ್ನೇ ಧ್ವಂಸಗೊಳಿಸಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.

ಘಟನಾ ಸ್ಥಳಕ್ಕೆ ಗದಗ–ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರ ತೆರವುಗೊಳಿಸಲು ಸೂಚನೆ ನೀಡಿದ್ದಾರೆ. ಅಧಿಕಾರಿಗಳ ತ್ವರಿತ ಸ್ಪಂದನೆಗೆ ಅಭಿನಂದನೆ ಸಲ್ಲಿಸಿದ ಕೃಷ್ಣಾ ಹಡಪದ, ಆದರೆ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಮತ್ತು ಪುನರ್ವಸತಿ ಕುರಿತು ಇನ್ನೂ ಸ್ಪಷ್ಟ ಘೋಷಣೆ ಆಗದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತ ಕುಟುಂಬಕ್ಕೆ ನೆರವು ಒದಗಿಸಲು ಜಿಲ್ಲಾಧಿಕಾರಿಗಳ ವಿಶೇಷ ನಿಧಿ, ಜಿಲ್ಲಾ ಉಸ್ತುವಾರಿ ಸಚಿವರ ಅನುದಾನ ಹಾಗೂ ನಗರಸಭೆಯ ತುರ್ತು ನಿಧಿಯನ್ನು ಸಮನ್ವಯಗೊಳಿಸಿ ಹೊಸ ಮನೆ ನಿರ್ಮಿಸಿಕೊಡಬೇಕು ಎಂದು ಅವರು ಪ್ರಸ್ತಾಪಿಸಿದ್ದಾರೆ. ಜೊತೆಗೆ ಹಾನಿಗೊಳಗಾದ ಸುತ್ತಮುತ್ತಲಿನ ಮನೆಗಳಿಗೂ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿದ್ದಾರೆ.

“ಬಡವರ ಕಣ್ಣೀರು ಒರೆಸುವುದೇ ಆಡಳಿತ ವ್ಯವಸ್ಥೆಯ ಪ್ರಮುಖ ಕರ್ತವ್ಯ. ಆದ್ದರಿಂದ ಜಿಲ್ಲಾಡಳಿತ, ಸಚಿವರು ಹಾಗೂ ನಗರಸಭೆ ಮಾನವೀಯ ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಂಡು ನಾಸೀರುದ್ದಿನ್ ಮುಲ್ಲಾ ಕುಟುಂಬಕ್ಕೆ ನ್ಯಾಯ ಒದಗಿಸಬೇಕು” ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande