
ಜಗದಲ್ಪುರ, 19 ಮೇ (ಹಿ.ಸ. ):
ಆ್ಯಂಕರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಮಧ್ಯ ವಲಯ ಮಂಡಳಿಯ 26ನೇ ಉನ್ನತ ಮಟ್ಟದ ಸಭೆ ಇಂದು ಛತ್ತೀಸ್‌ಗಢದ ಜಗದಲ್ಪುರದಲ್ಲಿ ಆರಂಭವಾಗಿದೆ. ಛತ್ತೀಸ್‌ಗಢ ಸೇರಿದಂತೆ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದು, ಬಸ್ತರ್ ಪ್ರದೇಶದಲ್ಲಿ ಮೊದಲ ಬಾರಿಗೆ ಇಂತಹ ಮಹತ್ವದ ಸಭೆ ನಡೆಯುತ್ತಿರುವುದರಿಂದ ಇದಕ್ಕೆ ವಿಶೇಷ ಮಹತ್ವ ದೊರೆತಿದೆ.
ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣುದೇವ ಸಾಯಿ ಆತ್ಮೀಯವಾಗಿ ಸ್ವಾಗತಿಸಿದರು.
ಉನ್ನತ ಮಟ್ಟದ ಸಭೆಯ ಹಿನ್ನೆಲೆಯಲ್ಲಿ ಜಗದಲ್ಪುರ ನಗರದಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣದಿಂದ ಸಭಾ ಸ್ಥಳದವರೆಗೆ ಭದ್ರತಾ ಪಡೆಗಳು ತೀವ್ರ ನಿಗಾವಹಿಸಿವೆ. ಆಡಳಿತ ಹಾಗೂ ಭದ್ರತಾ ಸಂಸ್ಥೆಗಳು ಸಂಪೂರ್ಣ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿವೆ.
ಸಭೆಯಲ್ಲಿ ಅಂತರರಾಜ್ಯ ಸಮನ್ವಯ, ಆಂತರಿಕ ಭದ್ರತಾ ವ್ಯವಸ್ಥೆ, ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ವಿಸ್ತರಣೆ, ಪೌಷ್ಟಿಕ ಆಹಾರ ಯೋಜನೆಗಳು, ವಿದ್ಯುತ್ ಮತ್ತು ನಗರಾಭಿವೃದ್ಧಿ, ಸಹಕಾರ ಹಾಗೂ ಆಡಳಿತಾತ್ಮಕ ಸಹಯೋಗ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸವಿಸ್ತಾರ ಚರ್ಚೆ ನಡೆಯಲಿದೆ.
ರಾಜ್ಯಗಳ ನಡುವೆ ಉತ್ತಮ ಹೊಂದಾಣಿಕೆ ಸಾಧಿಸಿ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡಲು ಸಮಗ್ರ ಕಾರ್ಯತಂತ್ರ ರೂಪಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ವಿಶೇಷವಾಗಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಸಮನ್ವಿತ ಕಾರ್ಯಾಚರಣೆ ನಡೆಸುವ ಕುರಿತು ಮಹತ್ವದ ತೀರ್ಮಾನಗಳು ಕೈಗೊಳ್ಳುವ ನಿರೀಕ್ಷೆಯಿದೆ.
ಒಮ್ಮೆ ನಕ್ಸಲ್ ಚಟುವಟಿಕೆಗಳಿಂದ ಸುದ್ದಿಯಾಗುತ್ತಿದ್ದ ಬಸ್ತರ್ ಪ್ರದೇಶ ಈಗ ಅಭಿವೃದ್ಧಿ ಮತ್ತು ಶಾಂತಿಯ ದಿಕ್ಕಿನಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ರಾಷ್ಟ್ರೀಯ ಮಟ್ಟದ ಈ ಮಹತ್ವದ ಸಭೆಯ ಆಯೋಜನೆ ಬಸ್ತರ್ನ ಬದಲಾಗುತ್ತಿರುವ ಹೊಸ ಗುರುತಿನ ಪ್ರತೀಕವೆಂದು ಪರಿಗಣಿಸಲಾಗಿದೆ.
ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ವಿಷ್ಣುದೇವ ಸಾಯಿ, “ಬಸ್ತರ್ನಲ್ಲಿ ಇಂತಹ ಉನ್ನತ ಮಟ್ಟದ ಸಭೆ ನಡೆಯುತ್ತಿರುವುದು ಇಡೀ ಪ್ರದೇಶಕ್ಕೆ ಹೆಮ್ಮೆಯ ಸಂಗತಿ. ಈಗ ಬಸ್ತರ್ ಶಾಂತಿ, ವಿಶ್ವಾಸ ಮತ್ತು ಅಭಿವೃದ್ಧಿಯ ಹೊಸ ದಾರಿಯಲ್ಲಿ ಸಾಗುತ್ತಿದೆ” ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.