ಹಾಸನದಲ್ಲಿ ‘ಸ್ಪರ್ಧಾ ಕುಟೀರ’ ಸ್ಥಾಪನೆಗೆ ಜಿಲ್ಲಾಧಿಕಾರಿ ಸೂಚನೆ
ಹಾಸನ, 18 ಮೇ (ಹಿ.ಸ.) : ಆ್ಯಂಕರ್ : ಹಾಸನ ಜಿಲ್ಲೆಯ ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ‘ಹಾಸನ ಸ್ಪರ್ಧಾ ಕುಟೀರ’ ಅಧ್ಯಯನ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅಧಿಕಾರಿಗಳಿಗೆ ಸೂಚನೆ ನ
Meeting


ಹಾಸನ, 18 ಮೇ (ಹಿ.ಸ.) :

ಆ್ಯಂಕರ್ : ಹಾಸನ ಜಿಲ್ಲೆಯ ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ‘ಹಾಸನ ಸ್ಪರ್ಧಾ ಕುಟೀರ’ ಅಧ್ಯಯನ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಗ್ರಂಥಾಲಯದ ತಾಂತ್ರಿಕ ವಿಭಾಗದ ಕೊಠಡಿಯನ್ನು ಸ್ಪರ್ಧಾತ್ಮಕ ಅಧ್ಯಯನ ಕೇಂದ್ರವಾಗಿ ರೂಪಿಸಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.

ಸ್ಪರ್ಧಾ ಕುಟೀರದಲ್ಲಿ ಸಮರ್ಪಕ ಕುಳಿತುಕೊಳ್ಳುವ ವ್ಯವಸ್ಥೆ, ಡಿಜಿಟಲ್ ಬೋರ್ಡ್ ಅಳವಡಿಕೆ ಹಾಗೂ ವಿವಿಧ ಇಲಾಖೆಗಳ ನೇಮಕಾತಿ ಅಧಿಸೂಚನೆಗಳನ್ನು ಪ್ರದರ್ಶಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ನಡೆಸುವಂತೆಯೂ ಅಧಿಕಾರಿಗಳಿಗೆ ತಿಳಿಸಿದರು.

ಗ್ರಂಥಾಲಯದ ಬಳಿಯ ವಾಹನ ನಿಲುಗಡೆ ಶೆಡ್ ಪ್ರದೇಶವನ್ನು ಓದುಗರ ಅಧ್ಯಯನಕ್ಕೆ ಅನುಕೂಲವಾಗುವಂತೆ ವಿಸ್ತರಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಕಲಾಭವನದ ಮೂರನೇ ಮಹಡಿಯಲ್ಲಿ ಇರುವ ಗ್ರಂಥಾಲಯವನ್ನು ಕೆಳಭಾಗಕ್ಕೆ ಸ್ಥಳಾಂತರಿಸಿ ಕಲಾಭವನ ಹಾಗೂ ಗ್ರಂಥಾಲಯಕ್ಕೆ ಸಂಪರ್ಕ ಕಲ್ಪಿಸುವ ಗೇಟ್ ನಿರ್ಮಿಸಲು ಸೂಚನೆ ನೀಡಿದರು.

ಓದುಗರಿಗೆ ಅನುಕೂಲವಾಗುವಂತೆ ಗ್ರಂಥಾಲಯದ ಬಳಿ ಇಂದಿರಾ ಕ್ಯಾಂಟೀನ್ ಆರಂಭಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಜೊತೆಗೆ ಗ್ರಂಥಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ವೈ-ಫೈ ಹಾಗೂ ಇಂಟರ್ನೆಟ್ ಸೌಲಭ್ಯ ಕಲ್ಪಿಸುವಂತೆ ನಿರ್ದೇಶನ ನೀಡಿದರು.

ಗ್ರಂಥಾಲಯದ ಆವರಣದಲ್ಲಿ ಸ್ವಚ್ಛತೆ ಕಾಪಾಡುವುದು, ಗಿಡ ನೆಡುವುದು, ಕಸದ ಬುಟ್ಟಿಗಳ ವ್ಯವಸ್ಥೆ ಹಾಗೂ ವಾಹನ ನಿಲುಗಡೆ ನಿರ್ವಹಣೆಗೆ ಕಾವಲುಗಾರರನ್ನು ನಿಯೋಜಿಸುವಂತೆ ಸೂಚನೆ ನೀಡಿದರು. ಹಳೆಯ ವಾಹನಗಳನ್ನು ನಿಯಮಾನುಸಾರ ವಿಲೇವಾರಿ ಮಾಡಿ ಸ್ಥಳದ ಸದ್ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ರಜೆ ದಿನಗಳಲ್ಲಿಯೂ ವಿದ್ಯಾರ್ಥಿಗಳು ಓದಲು ಬರುವ ಹಿನ್ನೆಲೆ ಗ್ರಂಥಾಲಯ ನಿರಂತರ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಗ್ರಂಥಾಲಯದ ಮುಂಭಾಗದಲ್ಲಿರುವ ಹೂವಿನ ಹಾಗೂ ಹಣ್ಣಿನ ಅಂಗಡಿಗಳನ್ನು ತೆರವುಗೊಳಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕಿ ಹಸೀನಾ ತಾಜ್, ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕಿ ನಳಿನಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಮಕೃಷ್ಣ, ತಹಸೀಲ್ದಾರ್ ಗೀತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande