ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ ; ಎಂಟು ಕಾರ್ಮಿಕರ ದುರ್ಮರಣ
ಲಖಿಂಪುರ್ ಖೇರಿ, 18 ಮೇ (ಹಿ.ಸ.) : ಆ್ಯಂಕರ್ : ಉತ್ತರ ಪ್ರದೇಶದ ಲಖಿಂಪುರ್-ಬಹ್ರೈಚ್ ರಾಷ್ಟ್ರೀಯ ಹೆದ್ದಾರಿ–730ರಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಹ್ರೈಚ್ ದಿಕ್ಕಿನಿಂದ ಅತಿವೇಗ
Accident


ಲಖಿಂಪುರ್ ಖೇರಿ, 18 ಮೇ (ಹಿ.ಸ.) :

ಆ್ಯಂಕರ್ : ಉತ್ತರ ಪ್ರದೇಶದ ಲಖಿಂಪುರ್-ಬಹ್ರೈಚ್ ರಾಷ್ಟ್ರೀಯ ಹೆದ್ದಾರಿ–730ರಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಹ್ರೈಚ್ ದಿಕ್ಕಿನಿಂದ ಅತಿವೇಗದಲ್ಲಿ ಬರುತ್ತಿದ್ದ ಟ್ರಕ್, ಕಾರ್ಮಿಕರನ್ನು ಸಾಗಿಸುತ್ತಿದ್ದ ರೈಡ್ ಮ್ಯಾಜಿಕ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತರಲ್ಲಿ ಆರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು ಲಖಿಂಪುರದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಬಹ್ರೈಚ್ ಜಿಲ್ಲೆಯ ನಾನ್ಪಾರಾದಲ್ಲಿರುವ ತಮ್ಮ ಗ್ರಾಮಕ್ಕೆ ಮರಳುತ್ತಿದ್ದರು ಎನ್ನಲಾಗಿದೆ. ಬೆಳಿಗ್ಗೆ ಸುಮಾರು 8 ಗಂಟೆಯ ವೇಳೆಗೆ ಅಪಘಾತ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಗೆ ಮ್ಯಾಜಿಕ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಆಡಳಿತಾಧಿಕಾರಿಗಳು ಭಾರೀ ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ಧಾವಿಸಿದರು. ಸ್ಥಳೀಯರ ಸಹಾಯದಿಂದ ವಾಹನದಲ್ಲಿ ಸಿಲುಕಿಕೊಂಡಿದ್ದವರನ್ನು ಹೊರತೆಗೆದು ಸರ್ಕಾರಿ ಆಂಬ್ಯುಲೆನ್ಸ್ ಮೂಲಕ ಖಮರಿಯಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಎಂಟು ಜನರು ಮೃತಪಟ್ಟಿರುವುದಾಗಿ ಘೋಷಿಸಿದರು.

ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ನಂತರ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ಬಳಿಕ ಕ್ರೇನ್ ಸಹಾಯದಿಂದ ಹಾನಿಗೊಳಗಾದ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಲಾಯಿತು.

ಪೊಲೀಸರು ಮೃತರ ಗುರುತು ಪತ್ತೆ ಕಾರ್ಯದಲ್ಲಿ ತೊಡಗಿದ್ದು, ಅವರ ಬಳಿ ದೊರೆತ ಮೊಬೈಲ್ ಹಾಗೂ ಇತರ ದಾಖಲೆಗಳ ಆಧಾರದ ಮೇಲೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡುತ್ತಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande