ಬಸವನಬಾಗೇವಾಡಿ ಕ್ಷೇತ್ರದಲ್ಲಿ ಕುಡಿಯುವ ನೀರು–ವಿದ್ಯುತ್ ಸಮಸ್ಯೆಗಳ ಪ್ರಗತಿ ಪರಿಶೀಲನೆ
ವಿಜಯಪುರ, 18 ಮೇ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ನಿಡಗುಂದಿ ಹಾಗೂ ಕೊಲ್ಹಾರ ತಾಲ್ಲೂಕುಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಬೃಹತ್ ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಕಾಮಗಾರಿಗಳ ಸ್ಥಿತಿಗತಿ ಅವಲೋಕಿಸಿದ ಸಚಿವ ಶಿವಾನಂದ ಪಾಟೀಲ
Meeting


ವಿಜಯಪುರ, 18 ಮೇ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ನಿಡಗುಂದಿ ಹಾಗೂ ಕೊಲ್ಹಾರ ತಾಲ್ಲೂಕುಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಬೃಹತ್ ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಕಾಮಗಾರಿಗಳ ಸ್ಥಿತಿಗತಿ ಅವಲೋಕಿಸಿದ ಸಚಿವ ಶಿವಾನಂದ ಪಾಟೀಲ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ಜಲಧಾರೆ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ತಾಕೀತು ಮಾಡಲಾಯಿತು. ಪೈಪ್ಲೈನ್ ಅಳವಡಿಕೆ, ಜಾಕ್ವೆಲ್ ನಿರ್ಮಾಣ, ಜಲಶುದ್ಧೀಕರಣ ಘಟಕ ಹಾಗೂ ಎತ್ತರ ಮಟ್ಟದ ಜಲಸಂಗ್ರಹಾಗಾರಗಳ ಕಾಮಗಾರಿಗಳಲ್ಲಿ ಯಾವುದೇ ವಿಳಂಬ ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಯಿತು.

ಜಲಜೀವನ್ ಮಿಷನ್ ಯೋಜನೆಯಡಿ ಮಣ್ಣೂರ, ಬೊಮ್ಮನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಪೂರ್ಣವಾಗಿರುವ ಕಾಮಗಾರಿಗಳನ್ನು ತ್ವರಿತಗೊಳಿಸಲು ಸೂಚಿಸಲಾಯಿತು. ವಿಶೇಷವಾಗಿ ಡೋಣೂರ ಮತ್ತು ತಡಲಗಿ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ನಿರ್ಲಕ್ಷ್ಯ ಮತ್ತು ವಿಳಂಬ ತೋರುತ್ತಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಅಮೃತ 2.0 ಯೋಜನೆಯಡಿ ಬಸವನಬಾಗೇವಾಡಿ ಪಟ್ಟಣದ ‘ರೈಸಿಂಗ್ ಮೇನ್’ ಕೊಳವೆ ಮಾರ್ಗ ಹಾಗೂ ನಿಡಗುಂದಿ ಪಟ್ಟಣದ ಆಂತರಿಕ ಕೊಳವೆ ಮಾರ್ಗಗಳ ಕಾಮಗಾರಿಯನ್ನು ವೇಗಗೊಳಿಸಲು ಸೂಚನೆ ನೀಡಲಾಯಿತು.

ಸಭೆಯಲ್ಲಿ ಹೆಸ್ಕಾಂ ಸಂಬಂಧಿತ ಸಮಸ್ಯೆಗಳಿಗೂ ಆದ್ಯತೆ ನೀಡಲಾಯಿತು. ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗದಂತೆ ನಿಗಾ ವಹಿಸುವಂತೆ ಹಾಗೂ ಲೈನ್ ಫಾಲ್ಟ್ಗಳನ್ನು ತಕ್ಷಣವೇ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಗ್ರಾಮೀಣ ಭಾಗದಲ್ಲಿ ರೈತರಿಗೆ ತೊಂದರೆ ಉಂಟುಮಾಡುತ್ತಿರುವ ಸುಟ್ಟುಹೋದ ಟ್ರಾನ್ಸ್ಫಾರ್ಮರ್ಗಳನ್ನು ಯುದ್ಧೋಪಾದಿಯಲ್ಲಿ ಬದಲಾಯಿಸಿಕೊಡಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ಕ್ಷೇತ್ರದ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ತಲುಪಿಸುವುದು ಹಾಗೂ ರೈತರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande