
ದಾವಣಗೆರೆ, 18 ಮೇ (ಹಿ.ಸ.) :
ಆ್ಯಂಕರ್ : ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕಲ್ಲೇದೇವರಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾದ ಶಾಲಾ ದಾಖಲಾತಿ ಪ್ರಾರಂಭೋತ್ಸವ ಹಾಗೂ ನೂತನ ಕೊಠಡಿಗಳ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಅಭಿವೃದ್ಧಿಗಾಗಿ ದಾನಿಯಾಗಿ ಮುಂದಾಗಿರುವ ಹರ್ಷ ಕುಂಬಳಗುಂಟೆ ಅವರು 12 ಕೊಠಡಿಗಳನ್ನು ಒಳಗೊಂಡ ಆಧುನಿಕ ಶೈಲಿಯ ಶಾಲಾ ಕಟ್ಟಡ ಸಂಕೀರ್ಣ ನಿರ್ಮಾಣಕ್ಕೆ ಕೈಜೋಡಿಸಿರುವುದನ್ನು ಸಂಸದೆ ಶ್ಲಾಘಿಸಿದರು. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸೌಲಭ್ಯ ಒದಗಿಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿರುವ ಈ ಕಾರ್ಯ ಮಾದರಿಯ ಸೇವೆಯಾಗಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಮಾಜದ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದ್ದು, ದಾನಿಗಳ ಸಹಕಾರದಿಂದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಇನ್ನಷ್ಟು ಬಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣವಾಗುವುದರ ಜೊತೆಗೆ, ಶಾಲೆಯ ದಾಖಲಾತಿ ಪ್ರಮಾಣವೂ ಹೆಚ್ಚಲು ಈ ಯೋಜನೆ ನೆರವಾಗಲಿದೆ. ಸೇವಾ ಮನೋಭಾವದಿಂದ ಶಾಲಾ ಅಭಿವೃದ್ಧಿಗೆ ಕೈಜೋಡಿಸಿರುವ ದಾನಿಗಳ ಕಾರ್ಯ ಇತರರಿಗೂ ಪ್ರೇರಣೆಯಾಗಲಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.