
ಕಲಬುರಗಿ, 18 ಮೇ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ನವೋದ್ಯಮ ಬೆಳವಣಿಗೆಗೆ ಸರ್ಕಾರದ ವಿಶೇಷ ಒತ್ತು ನೀಡಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯ ಗೋಲ್ಡ್ ಹಬ್ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಇಲಾಖೆ, ಕೆಕೆಆರ್ಡಿಬಿ ಹಾಗೂ ಕೃಷಿಕಲ್ಪ ಅಡಿಯಲ್ಲಿ ಆಯೋಜಿಸಲಾಗಿದ್ದ “ಕೃಷಿಕಲ್ಪ ಸೆಂಟರ್ ಆಫ್ ಎಕ್ಸಲೆನ್ಸ್ ” ಉದ್ಘಾಟನೆ ಹಾಗೂ ‘ವಿಕಾಸ ಮತ್ತು ಪ್ರೇರಣಾ’ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ಈಗಾಗಲೇ 18 ಸಾವಿರಕ್ಕೂ ಹೆಚ್ಚು ನೂತನ ಸ್ಟಾರ್ಟ್ಅಪ್ಗಳು ನೋಂದಾಯಿಸಿಕೊಂಡಿದ್ದು, ನವೋದ್ಯಮಗಳಿಗೆ ಮಾರ್ಗದರ್ಶನ, ಪ್ರಯೋಗಾತ್ಮಕ ಅವಕಾಶ ಮತ್ತು ಆರ್ಥಿಕ ಬೆಂಬಲ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ಪ್ರತಿ ಸ್ಟಾರ್ಟ್ಅಪ್ಗೆ ₹50 ಲಕ್ಷ ಅನುದಾನ ನೀಡುವ ಯೋಜನೆ ರೂಪಿಸಲಾಗಿದ್ದು, ಆರಂಭಿಕ ಹಂತದಲ್ಲಿ 1,500 ಸ್ಟಾರ್ಟ್ಅಪ್ಗಳಿಗೆ ಸರ್ಕಾರ ನೆರವು ನೀಡಲು ಸಿದ್ಧವಾಗಿದೆ ಎಂದು ತಿಳಿಸಿದರು.
‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ಬೆಂಗಳೂರು ಹೊರತಾದ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಸೇರಿದಂತೆ ಟೈರ್-2 ಮತ್ತು ಟೈರ್-3 ನಗರಗಳಲ್ಲಿ ಉದ್ಯಮ ಸ್ಥಾಪನೆಗೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ ಎಂದರು. ಯುವ ಉದ್ಯಮಿಗಳಿಗೆ ಅಗತ್ಯ ಮೂಲಸೌಕರ್ಯ, ತರಬೇತಿ ಮತ್ತು ಹೂಡಿಕೆ ಅವಕಾಶಗಳನ್ನು ಕಲ್ಪಿಸುವ ಮೂಲಕ ಪ್ರಾದೇಶಿಕ ಸಮತೋಲನದ ಬೆಳವಣಿಗೆಗೆ ಸರ್ಕಾರ ಒತ್ತು ನೀಡುತ್ತಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಡೀಪ್ಟೆಕ್ ಸ್ಟಾರ್ಟ್ಅಪ್ಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಅನುದಾನ ನೀಡಲು ಸರ್ಕಾರ ಸಜ್ಜಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಮೈಸೂರಿನಲ್ಲಿ 402, ಮಂಗಳೂರಿನಲ್ಲಿ 332, ಹುಬ್ಬಳ್ಳಿ-ಧಾರವಾಡದಲ್ಲಿ 463 ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ 282 ಸ್ಟಾರ್ಟ್ಅಪ್ಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಗೆ ಒಟ್ಟು ₹1,000 ಕೋಟಿ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ವಿವರಿಸಿದರು.
ಐಐಐಟಿ ರಾಯಚೂರಿನ ಬೆಳವಣಿಗೆಗೆ ಅಗತ್ಯವಾಗುವ ಮಾನವ ಸಂಪನ್ಮೂಲ ಸೃಷ್ಟಿಸಲು ಕೆಕೆಆರ್ಡಿಬಿಯಿಂದ ವಿಶೇಷ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕಲಬುರಗಿ ರೊಟ್ಟಿ ಬ್ರ್ಯಾಂಡ್ ಈಗ ದೇಶದ ಗಡಿ ದಾಟಿ ಕೆನಡಾ ಮತ್ತು ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ರಫ್ತಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಮಹಿಳಾ ಸಂಘಗಳು ತಯಾರಿಸುವ ರೊಟ್ಟಿಗಳನ್ನು ರಫ್ತು ಮಾಡಲು ಇತ್ತೀಚೆಗೆ ಪುಣೆ ಮೂಲದ ಖಾಸಗಿ ಸಂಸ್ಥೆಯೊಂದರೊಂದಿಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದ್ದು, ವರ್ಷಕ್ಕೆ ಒಂದು ಲಕ್ಷ ರೊಟ್ಟಿಗಳನ್ನು ಸರಬರಾಜು ಮಾಡುವ ಗುರಿ ಇಡಲಾಗಿದೆ ಎಂದರು. ಈ ಯೋಜನೆಯ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ದಿಕ್ಕು ಸಿಕ್ಕಿದೆ ಎಂದು ಹೇಳಿದರು.
ಕೃಷಿ ವಲಯದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಕಲಬುರಗಿಯಲ್ಲಿ ಸ್ಥಾಪಿಸಲಾಗುತ್ತಿರುವ “ಅಗ್ರಿಕಲ್ಚರ್ ಸೆಂಟರ್ ಆಫ್ ಎಕ್ಸಲೆನ್ಸ್” ದೇಶದಲ್ಲೇ ಮೊದಲನೆಯ ಪ್ರಯತ್ನವಾಗಿದ್ದು, ಕೃಷಿ ಕ್ಷೇತ್ರದ ಸಂಶೋಧನೆ, ತಂತ್ರಜ್ಞಾನ ಮತ್ತು ನವೀನ ಆವಿಷ್ಕಾರಗಳಿಗೆ ಇದು ವೇದಿಕೆಯಾಗಲಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಮತ್ತು ನವೋದ್ಯಮಗಳ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.