
ಕಲಬುರಗಿ, 18 ಮೇ (ಹಿ.ಸ.) :
ಆ್ಯಂಕರ್ : ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ಕನಸಾಗಿದ್ದ ಕಲ್ಬುರ್ಗಿ ನೂತನ ಮೃಗಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಇಂದು ಲೋಕಾರ್ಪಣೆಗೊಳಿಸಿದರು.
ಸಚಿವರು, ಶಾಸಕರು ಹಾಗೂ ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೃಗಾಲಯವನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಯಿತು.
ಚಿತ್ತಾಪುರ ತಾಲೂಕಿನ ಮಾಡಬೋಳ್ ಸಮೀಪ ಸುಮಾರು 23 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ಮೃಗಾಲಯವನ್ನು ಅಭಿವೃದ್ಧಿಪಡಿಸಲಾಗಿದೆ.
ಇಲ್ಲಿ ಹುಲಿ, ಸಿಂಹ, ಕರಡಿ, ಮೊಸಳೆ, ಜೀಬ್ರಾ, ಚುಕ್ಕೆ ಚಿಂಕೆ, ಲಂಗೂರ್ ಸೇರಿದಂತೆ ಹಲವು ವನ್ಯಜೀವಿಗಳಿಗೆ ವಿಶಾಲ ಮತ್ತು ನೈಸರ್ಗಿಕ ವಾಸಸ್ಥಾನಗಳನ್ನು ನಿರ್ಮಿಸಲಾಗಿದೆ. ಜೊತೆಗೆ ವಿವಿಧ ಜಾತಿಯ ಪಕ್ಷಿಗಳಿಗೆ ಸಹ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಈ ಮೃಗಾಲಯವು ಪ್ರದೇಶದ ಜನರಿಗೆ ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಪರಿಚಯಿಸುವ ಪ್ರಮುಖ ಕೇಂದ್ರವಾಗಲಿದೆ ಎಂದು ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ, ಜೀವ ವೈವಿಧ್ಯ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಪ್ರೀತಿ ಮತ್ತು ಅರಿವು ಮೂಡಿಸಲು ಮೃಗಾಲಯ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಮೃಗಾಲಯವು ಕಲಬುರಗಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಉತ್ತಮ ಪ್ರವಾಸಿ ತಾಣವಾಗುವ ಜೊತೆಗೆ ಪರಿಸರ ಶಿಕ್ಷಣ ಮತ್ತು ಜಾಗೃತಿ ಕೇಂದ್ರವಾಗಿಯೂ ಬೆಳೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.