
ಬೆಳಗಾವಿ, 18 ಮೇ (ಹಿ.ಸ.) :
ಆ್ಯಂಕರ್ : ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನ ಸಭಾ ಕ್ಷೇತ್ರದ ಉಳ್ಳಾಗಡ್ಡಿ ಖಾನಾಪೂರ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಶಾಲೆಯ ಮೂಲಸೌಕರ್ಯ ಹಾಗೂ ಶಿಕ್ಷಣ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದರು.
ಶಾಲೆಗೆ ಭೇಟಿ ನೀಡಿದ ಸಚಿವರು ತರಗತಿ ಕೊಠಡಿಗಳು, ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ ಸೇರಿದಂತೆ ನಾನಾ ಸೌಲಭ್ಯಗಳ ಸ್ಥಿತಿಗತಿಗಳನ್ನು ಅವಲೋಕಿಸಿದರು.
ಇದೇ ವೇಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಿ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಅಗತ್ಯಗಳ ಕುರಿತು ಮಾಹಿತಿ ಪಡೆದರು.
ಶಾಲೆಯ ಅಭಿವೃದ್ಧಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ವಾತಾವರಣ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಶಾಲೆಯಲ್ಲಿನ ಕೆಲವು ಮೂಲಸೌಕರ್ಯ ಕೊರತೆಗಳ ಕುರಿತು ಸಚಿವರ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲೆಯ ಶಿಕ್ಷಕರು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.